ಮಲ್ಲು ಪೂಜಾರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನ ಕೊಪ್ಪಳ: ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಆಪ್ತ ಎಂದೇ ಗುರುತಿಸಿಕೊಂಡಿರುವ ಡಿಎಸ್ಎಸ್ ಸಂಘಟನೆ ಮುಖಂಡ ಮಲ್ಲು ಪೂಜಾರ ಮೇಲೆ ಮಂಗಳವಾರ ನಗರದಲ್ಲಿಯೇ ಹಲ್ಲೆ ನಡೆದ ಘಟನೆ ಸಂಭವಿಸಿದೆ. ಕುವೆಂಪು ನಗರದ ಅವರ ನಿವಾಸದಿಂದ ಆಗಮಿಸುತ್ತಿದ್ದ ವೇಳೆ ಲಿಂಗಾಯತ ರುದ್ರಭೂಮಿಯ ಬಳಿ ಬೈಕ್ ನಲ್ಲಿ ಬಂದಿದ್ದ ಐವರು ಮುಸುಕುದಾರಿಗಳು ಹಲ್ಲೆ ಮಾಡಿದ್ದಾರೆ. ಕಾರಿನಲ್ಲಿ ಆಗಮಿಸುತ್ತಿದ್ದ ಮಲ್ಲು ಪೂಜಾರ ಅವರನ್ನು ತಡೆದ ಬೈಕ್ ನಲ್ಲಿದ್ದ ಮುಸುಕುಧಾರಿಗಳು ವಿನಾಕಾರಣ ಜಗಳ ತೆಗೆದು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಆದರೆ, ಕಾರಿನ ಗ್ಲಾಸ್ ಏರಿಸಿಕೊಂಡು ಅಲ್ಲಿಂದ ಪಾರಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯ ಕುರಿತು ಮಲ್ಲು ಪೂಜಾರ ಅವರು ಕೊಪ್ಪಳ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.