ದುಡಿಯುವ ಕೈಗಳಿಗೆ ಯೋಜನೆಗಳ ಮೂಲಕ ನೆರವು: ಪಾಟೀಲ್‌ ನಡಹಳ್ಳಿ

KannadaprabhaNewsNetwork | Updated : Mar 27 2024, 01:10 AM IST

ಸಾರಾಂಶ

ಜನರಿಗೆ ನೇರವಾಗಿ ಹಣ ಕೊಡುತ್ತಿದ್ದೇವೆಂದು ಕಾಂಗ್ರೆಸ್‌ ಪಕ್ಷದವರು ಹೇಳುತ್ತಿದ್ದಾರೆ. ಆದರೆ, ನಮ್ಮ ಸರ್ಕಾರಗಳು ಯೋಜನೆಗಳ ಮೂಲಕ ದುಡಿಯುವ ಕೈಗಳಿಗೆ ಸಹಾಯ ಮಾಡಿವೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಣಿ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜನರಿಗೆ ನೇರವಾಗಿ ಹಣ ಕೊಡುತ್ತಿದ್ದೇವೆಂದು ಕಾಂಗ್ರೆಸ್‌ ಪಕ್ಷದವರು ಹೇಳುತ್ತಿದ್ದಾರೆ. ಆದರೆ, ನಮ್ಮ ಸರ್ಕಾರಗಳು ಯೋಜನೆಗಳ ಮೂಲಕ ದುಡಿಯುವ ಕೈಗಳಿಗೆ ಸಹಾಯ ಮಾಡಿವೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ಮಾಡುವವರಿಗೆ ಪ್ರತಿ ಲೀಟರ್ ಹಾಲಿಗೆ ಮೊದಲ ಬಾರಿಗೆ ಪ್ರೋತ್ಸಾಹಧನ ಯೋಜನೆ ತಂದಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಮೂಲಕ ವರ್ಷಕ್ಕೆ 6 ಸಾವಿರ ರು. ಕೇಂದ್ರ ಸರ್ಕಾರ ಕೊಟ್ಟರೆ ರಾಜ್ಯದಿಂದ ₹ 4 ಸಾವಿರ ನೀಡಲಾಗುತ್ತಿತ್ತು. ಇದರ ಜೊತೆಗೆ ಸಹಾಯಧನ ರೂಪದಲ್ಲಿ ರೈತರಿಗೆ ಕೃಷಿ ಸಲಕರಣೆ, ಸ್ಪಿಂಕ್ಲರ್ ಸೆಟ್‌ಗಳಿಗೆ ಶೇ.90 ರಷ್ಟು ಸಹಾಯಧನ ನೀಡುವ ಯೋಜನೆ ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ ಇದೆಲ್ಲವನ್ನೂ ರೈತರು, ಜನ ಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಬಹಳ ಮಂದಿಗೆ ನಾವು ಪಕ್ಷಕ್ಕೆ ಬಹಳಷ್ಟು ದುಡಿದಿದ್ದೇವೆ. ಪಕ್ಷ ನಮಗೇನೂ ಮಾಡಲಿಲ್ಲ ಎನ್ನುವ ಭಾವನೆ ಇದೆ. ಆದರೆ, ನಾವು ದುಡಿಯುತ್ತಿರುವುದು ದೇಶ ಕಟ್ಟಲಿಕ್ಕೆ. ಸಮಾಜ ಕಟ್ಟಲಿಕ್ಕೆ ಎನ್ನುವ ಕಲ್ಪನೆ ನಮಗಿರಬೇಕು. ದಿನದಲ್ಲಿ ಕನಿಷ್ಠ ಒಂದು ಗಂಟೆ ಸಮಾಜಕ್ಕಾಗಿ ಮೀಸಲಿಡಬೇಕು. ಹೀಗೆ ಮಾಡಿದಲ್ಲಿ ನಿಮ್ಮ ಸೇವೆ ಸರಳವಾಗಿ ನೇರವಾಗಿ ಜನರಿಗೆ ಮುಟ್ಟಿಸಲು ಸಾಧ್ಯವಿದೆ ಎಂದು ಹೇಳಿದರು. ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಶಂಭೈನೂರು ಆನಂದಪ್ಪ ಮಾತನಾಡಿ, ರಾಜ್ಯ ರೈತ ಸಂಘದ ಸೂಚನೆ ಪ್ರಕಾರ ಈ ಲೋಕ ಸಭೆ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿ ಜೊತೆಗೆ ಪ್ರತಿ ಹಳ್ಳಿಗಳನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಮಾತನಾಡಿ, ಪಾಕ್ ಪರ ಘೋಷಣೆ ಕೂಗುವವರನ್ನು ಬೆಂಬಲಿಸು ವವರನ್ನು ಸೋಲಿಸಿ, ಭಾರತ್ ಮಾತಾಕಿ ಜೈ ಎನ್ನುವವರ ಕೈಗೆ ಅಧಿಕಾರ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ರೈತ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ರೈತರನ್ನು ಸಂಪರ್ಕಿಸಿ ನಮ್ಮ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಗೆಲ್ಲಿಸಲು ಪಣ ತೊಡಬೇಕು ಎಂದರು. ಸಭೆಯಲ್ಲಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಡಾ.ನವೀನ್, ರಾಜ್ಯ ಕಾರ್‍ಯಕಾರಣಿ ಸದಸ್ಯ ಕೆ.ಆರ್.ಆನಂದಪ್ಪ, ಜಿಲ್ಲಾ ಉಪಾಧ್ಯಕ್ಷ ನಿರಂಜನ್, ಪ್ರಧಾನ ಕಾರ್ಯದರ್ಶಿ ಮುಗುಳುವಳ್ಳಿ ದಿನೇಶ್, ಪಾದಮನೆ ದಿನೇಶ್ ಉಪಸ್ಥಿತರಿದ್ದರು.

26 ಕೆಸಿಕೆಎಂ 4ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಣಿ ಸಭೆಯನ್ನು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಉದ್ಘಾಟಿಸಿದರು. ಕಲ್ಮರುಡಪ್ಪ, ದೇವರಾಜ್‌ ಶೆಟ್ಟಿ, ಆನಂದಪ್ಪ ಇದ್ದರು.

Share this article