ಕನ್ನಡಪ್ರಭವಾರ್ತೆ ಚಿಕ್ಕಬಳ್ಳಾಪುರ
ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮುನ್ನವೇ ಸ್ವೀಪ್ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಸ್ವೀಪ್ ಕಾರ್ಯಕ್ರಮಗಳು ವೇಗ ಪಡೆದುಕೊಂಡಿದ್ದು, ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲೂಕು ಸ್ವೀಪ್ ಸಮಿತಿಗಳು ವಿವಿಧ ಇಲಾಖೆಗಳ ಸಮನ್ವಯ ಮತ್ತು ಸಹಯೋಗದಲ್ಲಿ ಮತದಾನದ ಮಹತ್ವದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಕಾರ್ಯಗಳನ್ನು ಮಾಡಿದವು.
ಮನೆಯಿಂದಲೇ ಮತದಾನ ಮಾಡಲು ಅವಕಾಶ:ಗೌರಿಬಿದನೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ.ಹೊನ್ನಯ್ಯ ಸ್ವೀಪ್ ತಂಡದೊಂದಿಗೆ ತರಿದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಮೈಲಗಾನಹಳ್ಳಿ ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರಿಗೆ ಮತ್ತು ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿ, ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಇದೆ. ಇದನ್ನು ಸದ್ಬಳಕೆ ಮಾಡಿಕೊಂಡು ಮತದಾನ ಮಾಡಬೇಕು, ಜೊತೆಗೆ ಮತದಾನದ ದಿನದಂದು ಆಗಮಿಸುವ ಅಂಧ ಹಾಗೂ ವಿಕಲಚೇತನ ಮತದಾರರಿಗೆಂದು ಮನೆಯಿಂದ ಮತಗಟ್ಟೆವರೆಗೆ ಆಗಮಿಸಲು ವಾಹನ ಸೌಲಭ್ಯ ಕಲ್ಪಿಸಲಾಗುತ್ತದೆ. ಒಟ್ಟಾರೆ ಮತದಾರೆಲ್ಲರೂ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಹಾಗೂ ಪ್ರಾಮಾಣಿಕತೆಯಿಂದ ಮತದಾನ ಮಾಡುವುದು ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿ ವ್ಯಾಪ್ತಿಯ ಕಂದಕನಹಳ್ಳಿ ಗ್ರಾಮದ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರಿಗೆ ಮತದಾನದ ಮಹತ್ವ ಸಾರುವ ಕರಪತ್ರಗಳು ಮತ್ತು ಬಿತ್ತಿಪತ್ರಗಳನ್ನು ವಿತರಿಸಿ ಮತದಾನ ಬಗ್ಗೆ ತಾಲ್ಲೂಕು ಸ್ವೀಪ್ ಸಮಿತಿಯಿಂದ ಅರಿವು ಮೂಡಿಸಲಾಯಿತು. ತಿಪ್ಪೇನಹಳ್ಳಿ ಗ್ರಾಮದಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಪದಾಧಿಕಾರಿಗಳು ,ಸದಸ್ಯರು ಮತದಾನದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಜೊತೆಗೆ ‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ಬ್ಯಾನರ್ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸುವ ಜಿಲ್ಲಾಡಳಿತ ಕಾರ್ಯಕ್ಕೆ ಕೈ ಜೋಡಿಸಿದರು.
ಇಂದಿನ ಸ್ವಿಪ್ ಚುಟುವಟಿಕೆಗಳಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮತ್ತು ಗುಡಿಬಂಡೆ ತಾಪಂ ಆಡಳಿತಾಧಿಕಾರಿ ಸಂತೋಷ್ ಕುಮಾರ್ ಪಾಟೀಲ್, ಗುಡಿಬಂಡೆ ತಹಸೀಲ್ದಾರ್ ಎನ್.ಮನಿಷ್, ಕಾರ್ಯನಿರ್ವಾಹಕ ಅಧಿಕಾರಿ ಆರ್.ಹೇಮಾವತಿ, ಗೌರಿಬಿದನೂರು ತಾಪಂ ಸಿಇಒ ಜಿ.ಕೆ ಹೊನ್ನಯ್ಯ, ಪಿಡಿಒ ಶ್ರೀನಿವಾಸ್ ಸೇರಿ ಸ್ಥಳೀಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಇದ್ದರು.