ಮಂಗನ ಕಾಯಿಲೆ ನಿಯಂತ್ರಣಕ್ಕೆ ಸಮನ್ವಯದಿಂದ ಕಾರ್ಯ ನಿರ್ವಹಿಸಲು ಸಹಾಯಕ ಆಯುಕ್ತೆ ಕಾವ್ಯಾರಾಣಿ ಸೂಚನೆ

KannadaprabhaNewsNetwork | Published : Oct 12, 2024 12:07 AM

ಸಾರಾಂಶ

2023ರ ನವೆಂಬರ್‌ದಿಂದ 2024ರ ಮೇ ವರೆಗೆ ಕೆಎಫ್‌ಡಿ(ಮಂಗನ ಕಾಯಿಲೆ) ೫ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಓರ್ವರು ಮರಣ ಹೊಂದಿದ್ದಾರೆ.

ಶಿರಸಿ: ಇಲಾಖೆಗಳು ಸಮನ್ವಯದೊಂದಿಗೆ ಕೆಎಫ್‌ಡಿ(ಮಂಗನ ಕಾಯಿಲೆ) ನಿಯಂತ್ರಣಕ್ಕೆ ಕಾರ್ಯನಿರ್ವಹಿಸಬೇಕು ಎಂದು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಸೂಚಿಸಿದರು.

ನಗರದ ಆಡಳಿತ ಸೌಧದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಕೆಎಫ್‌ಡಿ(ಮಂಗನ ಕಾಯಿಲೆ) ಕುರಿತು ತಾಲೂಕು ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಮಾತನಾಡಿ, ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಆರೋಗ್ಯ ಶಿಕ್ಷಣ ನೀಡುವುದು ಮತ್ತು ಮಕ್ಕಳಲ್ಲಿ ಶೀಘ್ರ ರೋಗದ ಲಕ್ಷಣಗಳಾದ ಜ್ವರ, ಮೈ- ಕೈ ನೋವು, ವಾಂತಿ ಕಂಡುಬಂದಲ್ಲಿ ತಕ್ಷಣ ಆರೊಗ್ಯ ಇಲಾಖೆಯವರನ್ನು ಸಂಪರ್ಕಿಸಿ ಶೀಘ್ರ ರೋಗ ಪತ್ತೆ ಹಾಗೂ ಚಿಕಿತ್ಸೆ ನೀಡುವುದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಪಂಚಾಯಿತಿ ಮಟ್ಟದಲ್ಲಿ ಯಾವುದೇ ಮಂಗ ಮೃತಪಟ್ಟ ಘಟನೆ ವರದಿಯಾದಲ್ಲಿ ತಕ್ಷಣ ಗ್ರಾಪಂನಿಂದ ಕಂದಾಯ ಇಲಾಖೆ, ಆರೊಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಅರಣ್ಯ ಇಲಾಖೆಯೊಂದಿಗೆ ಜೊತೆಗೂಡಿ ಮಂಗನ ಶವ ಪರೀಕ್ಷೆ ಮಾಡಿ ಮಾದರಿಯನ್ನು ಕಳುಸಿಸುವ ಕುರಿತು ಕ್ರಮ ಕೈಗೊಳ್ಳಬೆಕೆಂದು ತಿಳಿಸಿದರು.

ಪಂಚಾಯಿತಿ ಮಟ್ಟದಲ್ಲಿ ವ್ಯಾಪಕವಾಗಿ ಎಲ್ಲ ಸಭೆಗಳಲ್ಲಿ ಆರೋಗ್ಯ ಶಿಕ್ಷಣ ನೀಡುವುದು, ಮೈಕಿಂಗ್ ಮಾಡುವುದು, ಕರಪತ್ರ ನೀಡುವುದು ರೋಗದ ಲಕ್ಷಣ ಕಂಡುಬಂದಲ್ಲಿ ಆ ಭಾಗದಲ್ಲಿ ಜ್ವರ ಸಮೀಕ್ಷೆ ಮಾಡುವುದು. ಜ್ವರ ಕ್ಲಿನಿಕ್ ನಡೆಸುವುದು ಹಾಗೂ ರೊಗಿಗಳಿಗೆ ಚಿಕಿತ್ಸೆ ನೀಡಬೇಕಿದೆ. ಕೆಎಫ್‌ಡಿ(ಮಂಗನ ಕಾಯಿಲೆ) ಕುರಿತು ಎಲ್ಲ ಖಾಸಗಿ ಆಸ್ಪತ್ರೆಗಳು ಕೆಎಫ್‌ಡಿ(ಮಂಗನ ಕಾಯಿಲೆ) ರೋಗದ ಲಕ್ಷಣಗಳು ಇರುವ ವ್ಯಕ್ತಿಯ ಕುರಿತು ಆರೋಗ್ಯ ಇಲಾಖೆಗೆ ತಿಳಿಸುವುದು ಹಾಗೂ ರಕ್ತದ ಮಾದರಿಯನ್ನು ಕಳುಹಿಸಿ ಶೀಘ್ರದಲ್ಲಿ ವರದಿಯನ್ನು ತರಿಸಿಕೊಳ್ಳುವಂತೆ ತಿಳಿಸಿದರು. ತಾಲೂಕು ಆಸ್ಪತ್ರೆಯಲ್ಲಿ ರೋಗ ಉಲ್ಬಣವಾದಲ್ಲಿ ಹಾಸಿಗೆ ಮೀಸಲಿಡುವಂತೆ ಪಂಡಿತ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಿ, ಆರ್‌ಟಿಪಿಸಿಆರ್ ಲ್ಯಾಬ್ ಸ್ಥಾಪನೆ ಕುರಿತು ಮಾಹಿತಿ ಪಡೆದರು. ತಾಲೂಕು ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್ ಮಾಹಿತಿ ನೀಡಿ, 2023ರ ನವೆಂಬರ್‌ದಿಂದ 2024ರ ಮೇ ವರೆಗೆ ಕೆಎಫ್‌ಡಿ(ಮಂಗನ ಕಾಯಿಲೆ) ೫ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಓರ್ವರು ಮರಣ ಹೊಂದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ನವೆಂಬರ್ ನಂತರ ರೋಗವು ಪುನಃ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮಗಳ ಕುರಿತು ತಿಳಿಸಿದರು.ತಹಸೀಲ್ದಾರ್‌ ಶ್ರೀಧರ ಮುಂದಲಮನಿ ಮಾತನಾಡಿ, ತುರ್ತು ವಿಕೋಪ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಮಾರ್ಗಸೂಚಿಯಂತೆ ಎಲ್ಲ ಇಲಾಖೆಯವರು ಸಂಘ- ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ರೋಗ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗಜಾನನ ಭಟ್ಟ, ಸಿಡಿಪಿಒ ವೀಣಾ ಸಿರ್ಸಿಕರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೇಶವಮೂರ್ತಿ ಇಮ್ಮಡಿ, ಖಾಸಗಿ ಆಸ್ಪತ್ರೆಯ ಪದಾಧಿಕಾರಿಗಳು, ಐಎಂಎ ಮುಖ್ಯಸ್ಥರು, ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮೇಲ್ವಿಚಾರಕರು ಇದ್ದರು.

Share this article