ಬಸವರಾಜ ಸರೂರ
ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಸ್ವಂತ ಕಟ್ಟಡದ ಭಾಗ್ಯ ಕೂಡಿ ಬಂದಿದ್ದು, ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.ಇಲ್ಲಿನ ಹುಣಸಿಕಟ್ಟಿ ರಸ್ತೆಯಲ್ಲಿ ಸುಮಾರು 4.30 ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ನೂತನ ಕಟ್ಟಡವನ್ನು ಈಗಾಗಲೇ ಸಾರಿಗೆ ಸಚಿವರು ಹಾಗೂ ಶಾಸಕರು ಉದ್ಘಾಟನೆ ಮಾಡಿದ್ದು, ಇದರ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರಿಗೆ ಉಪಯೋಗವಾಗಲಿದೆ.ಉತ್ತಮ ಕಟ್ಟಡ: 2018ರಲ್ಲಿ ನಗರಕ್ಕೆ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ನೀಡಲಾಗಿದೆ. ಈ ಕಚೇರಿ ವ್ಯಾಪ್ತಿಗೆ ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರ, ರಟ್ಟೀಹಳ್ಳಿ ತಾಲೂಕು ಸೇರಿವೆ. ಅಲ್ಲಿಂದ ಇಲ್ಲಿವರೆಗೂ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಸಲಾಗುತ್ತಿತ್ತು. ಇದರಿಂದ ವಾಹನ ಸವಾರರು ಪರವಾನಗಿ ಪಡೆಯಲು ದನದ ಮಾರುಕಟ್ಟೆಯ ಬಯಲು ಪ್ರದೇಶವನ್ನು ಆಶ್ರಯ ಪಡೆಯುತ್ತಿದ್ದರು. ಆದರೆ ಈಗ ಸ್ವಂತ ಕಟ್ಟಡ ಹಾಗೂ ವಾಹನ ಚಾಲನಪಥವನ್ನು ಹೊಂದಿರುವುದು ಎಲ್ಲರಿಗೂ ಸಂತಸ ಉಂಟು ಮಾಡಿದೆ.
₹ 10.50 ಕೋಟಿ ವೆಚ್ಚ: ಪ್ರಾದೇಶಿಕ ಸಾರಿಗೆ ಕಚೇರಿಯ ಕಟ್ಟಡ ಹಾಗೂ ವಾಹನ ಚಾಲನಪಥವನ್ನು ರು. 10.50 ಕೋಟಿ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಸಿವಿಲ್ ವಿಭಾಗದಿಂದ ನಿರ್ಮಿಸಲಾಗಿದೆ. ಉತ್ತಮ ಚಾಲನೆ ಪ್ರವೃತ್ತಿ ಹೊಂದಿ ಅಪಘಾತದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಚಾಲನಪಥವನ್ನು ನಿರ್ಮಿಸಲಾಗಿದ್ದು, ಪರವಾನಗಿ ಪಡೆಯಲು ಬರುವ ಚಾಲಕರಿಗೆ ಬಹಳಷ್ಟು ಅನುಕೂಲವಾಗಲಿದೆ.1500ರಿಂದ 2 ಸಾವಿರ: ಇಲ್ಲಿನ ಕಚೇರಿಯಲ್ಲಿ ತಿಂಗಳಿಗೆ ಸುಮಾರು 1500ರಿಂದ 2 ಸಾವಿರ ಜನರು ವಾಹನ ಚಾಲನಾ ಪರವಾನಗಿ, 1 ಸಾವಿರದಿಂದ 1500 ಹೊಸ ವಾಹನಗಳು ನೊಂದಣಿ, ಹಳೆಯ ವಾಹನಗಳ ಎಫ್‌ಸಿ ಸೇರಿದಂತೆ ಅನೇಕ ಕಾರ್ಯಗಳು ನಡೆಯುತ್ತಿವೆ. ಸ್ವಂತ ಕಟ್ಟಡದಿಂದ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ. ಸಹಾಯಕ ಪ್ರಾದೇಶಿಕ ಕಚೇರಿಗೆ ಸ್ವಂತ ಕಟ್ಟಡ ಹಾಗೂ ಚಾಲನಪಥ ನೀಡಿರುವುದು ಸಂತಸ ತಂದಿದೆ. ಆದರೆ ವಾಹನಗಳ ನೋಂದಣಿ ಹೆಚ್ಚಳ ಸೇರಿದಂತೆ ದೊಡ್ಡದಾದ ರಾಣಿಬೆನ್ನೂರು ಸಹಾಯಕ ಪ್ರಾದೇಶಿಕ ಕಚೇರಿಯನ್ನು ಪ್ರಾದೇಶಿಕ ಸಾರಿಗೆ ಕಚೇರಿಯಾಗಿ (ಆರ್‌ಟಿಒ)ಮೇಲ್ದರ್ಜೆಗೆ ಏರಿಸಬೇಕು ಎಂದು ಈಗಾಗಲೇ ಶಾಸಕರಿಗೆ ಹಾಗೂ ಮಾಜಿ ಶಾಸಕರಿಗೆ ಮನವಿ ಮಾಡಲಾಗಿದೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.ಈಗಾಗಲೇ ರಾಣಿಬೆನ್ನೂರಿನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಸ್ವಂತ ಕಟ್ಟಡ ಹಾಗೂ ಚಾಲನಪಥವನ್ನು ಸುಂದರವಾಗಿ ಹಾಗೂ ಗುಣಮಟ್ಟದಿಂದ ನಿರ್ಮಾಣ ಮಾಡಲಾಗಿದೆ. ಇದನ್ನು ಕೆಎಸ್‌ಆರ್‌ಟಿಸಿ ಇಲಾಖೆಯಿಂದ ಹಸ್ತಾಂತರ ಮಾಡಿಕೊಂಡು ಆದಷ್ಟು ಬೇಗ ಜನರಿಗೆ ಸೇವೆ ನೀಡಲಾಗುವುದು ಎಂದು ರಾಣಿಬೆನ್ನೂರು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಸುಬ್ರಾಯ ಶಂಭು ಹೆಗಡೆ ಹೇಳಿದರು.