ಕೊಪ್ಪಳ: ನಿರ್ಬಂಧಿತ ಔಷಧಗಳನ್ನು ಯಾವುದೇ ಔಷಧ ಅಂಗಡಿಗಳಲ್ಲಿ ವೈದ್ಯರ ಶಿಫಾರಸು ಇಲ್ಲದೆ ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ಜಿಲ್ಲೆಯ ಎಲ್ಲ ಔಷಧ ಅಂಗಡಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸೂಚಿಸಿದ್ದಾರೆ.
ವೈದ್ಯಕೀಯ ಬಳಕೆಗೆ ಪೂರ್ವಾನುಮತಿ ಇಲ್ಲದೆ ಅಕ್ರಮವಾಗಿ ಮಾದಕ ಔಷಧಗಳನ್ನು ತಯಾರಿಸುತ್ತಿರುವ ಅಥವಾ ಮಾರಾಟ ಮಾಡುತ್ತಿರುವ ನೋಂದಾಯಿಸದ ಕಂಪನಿಗಳು ಹಾಗೂ ಔಷಧಾಲಯಗಳನ್ನು ಗುರುತಿಸಲು ಔಷಧ ನಿಯಂತ್ರಣ ಇಲಾಖೆಗೆ ಜಿಲ್ಲೆಯ ಅಧಿಕಾರಿಗಳು ಅಗತ್ಯ ಸಹಾಯ ಒದಗಿಸಬೇಕು. ಮಾದಕ ಬೆಳೆಗಳನ್ನು ಗುರುತಿಸು ಮ್ಯಾಪ್ ಡ್ರಗ್ಸ್ ಆ್ಯಪ್ ಕುರಿತು ಎಲ್ಲ ಪೊಲೀಸ್ ಠಾಣೆಗಳಿಗೆ ಹಾಗೂ ಜಿಲ್ಲೆಯ ಎಲ್ಲ ಇಲಾಖೆಗಳಿಗಳಿಗೂ ಮುಂದಿನ ಆರು ತಿಂಗಳೊಳಗಾಗಿ ಕಡ್ಡಾಯ ತರಬೇತಿ ನೀಡಬೇಕು. ಅಕ್ರಮ ಮಾದಕ ವಸ್ತುಗಳ ಪೂರೈಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಿರ್ದಿಷ್ಟ ಗುರಿಗಳನ್ನು ನಿಗದಿಪಡಿಸಬೇಕು ಎಂದು ಸೂಚಿಸಿದರು.
ಕೃಷಿ ಭೂಮಿಯಲ್ಲಿ ಗಾಂಜಾ ಬೆಳೆ ಕುರಿತು ನಿಯಮಿತ ತಪಾಸಣೆ ನಡೆಸಬೇಕು. ಅಬಕಾರಿ ಇಲಾಖೆಯವರು ಜಿಲ್ಲೆಯ ಬಾರ್‌ಗಳಲ್ಲಿ ಡ್ರಗ್ಸ್ ಬಳಕೆಯ ಕುರಿತು ಪರಿಶೀಲನೆ ನಡೆಸಬೇಕು. ಬಾರ್‌ಗಳಲ್ಲಿ ಎನ್‌ಸಿಬಿಯ ಸೂಚನಾ ಫಲಕಗಳನ್ನು ಪ್ರದರ್ಶಿಸಬೇಕು ಎಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಪ್ರಾಥಮಿಕ ಶಿಕ್ಷಣ, ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳ ವಸತಿ ನಿಲಯ, ಪದವಿ, ಎಂಜಿನಿಯರಿಂಗ್ ಮೆಡಿಕಲ್ ಕಾಲೇಜು ಹಾಗೂ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಡ್ರಗ್ಸ್ ಟೆಸ್ಟಿಂಗ್ ಕಿಟ್‌ಗಳ ಮೂಲಕ ಪರೀಕ್ಷೆ ನಡೆಸಬೇಕು. ಮಾದಕ ವಸ್ತುಗಳ ಬಳಕೆಯ ಪ್ರಕರಣಗಳು ಪತ್ತೆಯಾದಲ್ಲಿ ಸಂಬಂಧಪಟ್ಟ ವಾರ್ಡನ್ ಅಥವಾ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು ಟಿ., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಡಿಡಿಪಿಐ ಸೋಮಶೇಖರಗೌಡ ಪಾಟೀಲ ಉಪಸ್ಥಿತರಿದ್ದರು.