ಹಾವೇರಿ: ಜಿಲ್ಲೆಯ ಕುಡಿವ ನೀರಿನ ಬವಣೆ ನೀಗಿಸಲು ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಜಾರಿಯಾಗಲೇಬೇಕು. ಅದಕ್ಕಾಗಿ ಪಕ್ಷಾತೀತವಾಗಿ ಹೋರಾಟ ನಡೆಸೋಣ ಎಂದು ರೈತ ಸಂಘ ಮತ್ತು ಹಸಿರು ಸೇನೆ ಕರೆ ನೀಡಿದೆ.
ಜಿಲ್ಲೆಯ ನೀರಿನ ಬವಣೆ ನೀಗಿಸಲು ಬೇಡ್ತಿ- ವರದಾ ನದಿ ಜೋಡಣೆ ಆಗಲೇಬೇಕು. ಅದಕ್ಕಾಗಿ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಮೂರು ದಶಕದ ಯೋಜನೆ ಈಗ ಮುನ್ನೆಲೆಗೆ ಬಂದಿರುವ ಹಿನ್ನೆಲೆ ಜಿಲ್ಲೆಯ ರೈತರು, ಮಠಾಧೀಶರು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಂದಲೂ ಒಮ್ಮತದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕುಡಿಯುವ ನೀರಿಗೆ ಯಾರೂ ವಿರೋಧ ಮಾಡಬಾರದು. ಉತ್ತರ ಕನ್ನಡ ಜಿಲ್ಲೆಯ ಜನರೂ ಸಾಥ್ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಳಂಬ ಮಾಡದೇ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು. ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಬಯಲು ಭೂಮಿಗೆ ನೀರಾವರಿ ಅನುಕೂಲ ಮಾಡಿಕೊಡಲು ವರದಾ ಮತ್ತು ಬೇಡ್ತಿ ನದಿಗಳನ್ನು ಜೋಡಣೆ ಮಾಡಿ ರೈತ ಸಮೂಹದ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ಹಾವೇರಿ, ಗದಗ, ಧಾರವಾಡ, ಕೊಪ್ಪಳ, ರಾಯಚೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳ ಜನ ಮತ್ತು ರೈತರಿಗೆ ಅನುಕೂಲವಾಗುವ ಈ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇಚ್ಚಾಶಕ್ತಿ ತೋರಿಸಿದ್ದು ಇದಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವರ್ಣವಲ್ಲಿ ಶ್ರೀಗಳು ಕೇವಲ ಒಂದು ಜಿಲ್ಲೆಯ ತಮಗೆ ಬೇಕಾದ ರೀತಿಯ ಜನರನ್ನು ಒಂದು ಕಡೆ ಕೂಡಿಸಿ ನದಿ ಜೋಡಣೆಗೆ ವಿರೋಧ ವ್ಯಕ್ತಪಡಿಸುವುದು ರೈತ ವಿರೋಧಿ ನೀತಿಯಾಗಿದೆ. ರಾಜ್ಯದಲ್ಲಿ ಇರುವ ಎಲ್ಲಾ ಮಠಾಧೀಶರು ರೈತರ ನೆರವಿಗೆ ಬಂದರೆ ಸ್ವರ್ಣವಲ್ಲಿ ಶ್ರೀಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ರೈತ ಸಂಘ ಇದಕ್ಕೆ ತಕ್ಕ ಉತ್ತರ ಕೊಟ್ಟು ರೈತ ಸಂಘದಿಂದ ಸಲಕೆ ಗುದ್ದಲಿ ಹಿಡಿದು ಬೇಡ್ತಿ ವರದಾ ನದಿ ಜೋಡಣೆ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಅಗಡಿ ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ, ರಾಮಣ್ಣ ಕೆಂಚಳ್ಳೆರ, ಮಲ್ಲಿಕಾರ್ಜುನ ಬಳ್ಳಾರಿ, ಶಿವಬಸಪ್ಪ ಗೋವಿ, ಮರಿಗೌಡ ಪಾಟಿಲ, ಶಿವಯೋಗಿ ಹೊಸಗೌಡ್ರ, ಪ್ರಭುಗೌಡ ಪ್ಯಾಟಿ, ಶಂಭಣ್ಣ ಮುತ್ತಗಿ, ಸೋಮಣ್ಣ ಜಡೆಗೊಂಡರ ಇತರರು ಉಪಸ್ಥಿತರಿದ್ದರು.
ಬೇಡ್ತಿ ವರದಾ ನದಿ ಜೋಡಣೆಗೆ ಒತ್ತಾಯಿಸಿ ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರು, ಜಿಪಂ, ತಾಪಂ ಮಾಜಿ ಸದಸ್ಯರು ಹೋರಾಟಕ್ಕೆ ಕೈಜೋಡಿಸಬೇಕು. ಇದು ಜಿಲ್ಲೆಯ ಜನರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ನಾವು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.