ಧಾರವಾಡ: ನವೀನ ತರಕಾರಿಗಳಿಂದ ಉತ್ತಮ ಆರೋಗ್ಯ, ಆದಾಯವೂ ದ್ವಿಗುಣ ಆಗುತ್ತದೆ ಎಂದು ಧಾರವಾಡ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಸ್ತರಣಾ ನಿರ್ದೇಶಕ ಡಾ. ಜೆ. ಬಿ.ಗೋಪಾಲಿ ವಿಶ್ವಾಸ ವ್ಯಕ್ತಪಡಿಸಿದರು.
ವಿಸ್ತರಣಾ ನಿರ್ದೇಶಕ ಡಾ. ಜೆ. ಬಿ.ಗೋಪಾಲಿ, ಈ ನವೀನ ತರಕಾರಿಗಳು ಆಂಟಿ ಆಕ್ಸಿಡೆಂಟ್, ಆಂಥೋಸಯಾನಿನ್, ವಿವಿಧ ವಿಟಮಿನ್‌ಗಳು ಹಾಗೂ ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಸಮೃದ್ಧವಾಗಿ ಒದಗಿಸುತ್ತವೆ. ನವೀನ ತರಕಾರಿಗಳಿಗಿರುವ ಅವಕಾಶಗಳನ್ನು ಹಾಗೂ ಇಂತಹ ಪೋಷಕಾಂಶ ಸಮೃದ್ಧ ತರಕಾರಿಗಳು ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ತಿಳಿಸಿದರು.
ಸಂಪನ್ಮೂಲ ವಿಜ್ಞಾನಿ ಪ್ರಾಧ್ಯಾಪಕಿ ಡಾ. ನಮಿತಾ ರಾವುತ, ವಿವಿಧ ವಿದೇಶಿ ಬೆಳೆಗಳ ಪ್ರಾಮುಖ್ಯತೆ, ಅವುಗಳ ವಿಪುಲ ಅವಕಾಶ ಹಾಗೂ ಸುಧಾರಿತ ತಂತ್ರಜ್ಞಾನಗಳ ಕುರಿತು ರೈತರಿಗೆ ಮನವರಿಕೆ ಮಾಡಿದರು.ಡಾ. ಚಂದ್ರಕಾಂತ ಕಾಂಬಳೆ, ಪೋಲ್ ಬೀನ್ಸ್ ತರಕಾರಿಯಲ್ಲಿ ಸುಧಾರಿತ ತಂತ್ರಜ್ಞಾನಗಳು ಹಾಗೂ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಬೆಳೆಸುವಂತೆ ರೈತರಿಗೆ ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಿಜಯಕುಮಾರ ರ್ಯಾಗಿ ಹಾಗೂ ಬಸವರಾಜೇಶ್ವರಿ ಪಾಟೀಲ ಇಲಾಖಾ ಯೋಜನೆಗಳ ಕುರಿತಾಗಿ ರೈತರಿಗೆ ಮಾಹಿತಿ ನೀಡಿದರು.ಸಹ ಪ್ರಾಧ್ಯಾಪಕ ಡಾ. ಶಿವಯೋಗಿ ರಾವಳದ ರೈತರ ಆತ್ಮವಿಶ್ವಾಸ ಹೆಚ್ಚಿಸುವ ಪ್ರೇರಣಾತ್ಮಕ ಮಾತುಗಳನ್ನು ಹೇಳಿದರು.
ರೈತರೊಂದಿಗೆ ಸಂವಾದಈ ತರಕಾರಿ ಬೆಳೆಗಳ ಕ್ಷೇತ್ರೋತ್ಸವದಲ್ಲಿ ಪೋಲ್ ಬೀನ್ಸ್, ಕೆಂಪು ಬಣ್ಣದ ಕ್ಯಾಬೇಜ್, ಚೈನೀಸ್ ಕ್ಯಾಬೇಜ್, ಪಾಕ್ಚೊಯ್, ಕೇಲ್, ಜುಕಣಿ ಸೇರಿದಂತೆ ವಿವಿಧ ತರಕಾರಿಗಳನ್ನು ಪ್ರದರ್ಶಿಸಲಾಯಿತು. ಉತ್ತಮ ಗುಣಮಟ್ಟದ ಈ ನವೀನ ತರಕಾರಿ ಬೆಳೆಗಳು ರೈತರ ಗಮನ ಸೆಳೆದವು.
ಈ ಸಂದರ್ಭದಲ್ಲಿ, ಇಂತಹ ನವೀನ ತರಕಾರಿಗಳನ್ನು ಧಾರವಾಡದಲ್ಲಿ ತೆರೆದ ನೆಲದಲ್ಲಿ ಯಶಸ್ವಿಯಾಗಿ ಬೆಳೆಯಬಹುದೇ? ಅವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆಯೇ? ಎಂಬುದಾಗಿ ರೈತರು ಕೇಳಿದ ಪ್ರಶ್ನೆಗಳಿಗೆ ವಿಜ್ಞಾನಿಗಳು ರೈತರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಮಾಹಿತಿಯ ವಿವರ ನೀಡಿದರು.40 ಕ್ಕೂ ಅಧಿಕ ರೈತರು ಈ ಕ್ಷೇತ್ರೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ವಿಸ್ತರಣಾ ಮುಂದಾಳು ಡಾ. ಪಲ್ಲವಿ ಜಿ. ಸಂಯೋಜಿಸಿ ನಿರೂಪಿಸಿದರು.