ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಶನಿವಾರ ಮನೆಯ ಅಡಿಪಾಯ ತೋಡಿದಾಗ ಸಿಕ್ಕ ಬಂಗಾರದ ಆಭರಣಗಳ ವಿಷಯವಾಗಿ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ ಅವರು ಸೋಮವಾರ ಉಲ್ಟಾ ಹೊಡೆದ ಹಿನ್ನೆಲೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಕೇಂದ್ರ ಪುರಾತತ್ವ ಇಲಾಖೆಯ ಅಧೀಕ್ಷಕ ರಮೇಶ್ ಮೂಲಿಮನಿ ಅವರು, ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಇದು ನಿಧಿಯಲ್ಲ, ಅವರ ಪೂರ್ವಜರು ಇಟ್ಟಿದ್ದ ಬಂಗಾರ ಎಂದು ಹೇಳಿಕೆ ನೀಡಿದ್ದರು. ಇದರಿಂದಾಗಿ ಆಸೆಯಿಂದ ನಮ್ಮ ಬಂಗಾರ ನಮಗೆ ಕೊಟ್ಟು ಬಿಡಿ ಎಂದು ಕುಟುಂಬಸ್ಥರು ಬೇಡಿಕೆ ಇಟ್ಟಿದ್ದರು. ಆದರೆ ಸೋಮವಾರ ಅದೇ ಅಧಿಕಾರಿ ಗ್ರಾಮಕ್ಕೆ ಬಂದು ಇದು ಸರ್ಕಾರದ ಆಸ್ತಿ ಎಂದು ಹೇಳಿರುವುದು ಸಹಜವಾಗಿಯೇ ಗ್ರಾಮಸ್ಥರನ್ನು ಕೆರಳಿಸಿದೆ.
ಯಾವುದೇ ಪ್ರಯೋಜನವಿಲ್ಲ: ಹಂಪಿ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು ಸೋಮವಾರ ಭೇಟಿ ಪರಿಶೀಲನೆ ನಡೆಸಿದರು. ಹಂಪಿ ವಿಭಾಗದ ನಿರ್ದೇಶಕ ಆರ್. ಸೈಜೇಶ್ವರ ಸ್ಥಳ ಪರಿವೀಕ್ಷಣೆ ವೇಳೆ ಮಾತನಾಡಿ, 1962ರ ನಿಯಮ ಪ್ರಕಾರ ₹10 ಮೌಲ್ಯಕ್ಕಿಂತ ಹೆಚ್ಚಿನ ಮೊತ್ತದ ವಸ್ತು ಸಿಕ್ಕರೆ ಸರ್ಕಾರಕ್ಕೆ ಸಲ್ಲುತ್ತದೆ. ಭೂಮಿಯ ಒಂದು ಅಡಿ ಆಳದಲ್ಲಿ ಏನೇ ಸಿಕ್ಕರೂ ಅದು ಸರ್ಕಾರದ್ದಾಗಿದೆ. ಇನ್ನೂ ಇದು ಯಾವ ಕಾಲಕ್ಕೆ ಸೇರಿದ್ದು, ಯಾರ ಆಳ್ವಿಕೆಯ ಎಂಬುದು ಬಗ್ಗೆ ಪರಿಶೀಲನೆ ನಡೆಯಬೇಕಿದೆ.ವಶಕ್ಕೆ ಪಡೆದ ಆಭರಣಗಳ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದ್ದನ್ನು ಬಿಟ್ಟಲ್ಲಿ ಆ ಕುಟುಂಬಕ್ಕೆ ಮಾತ್ರ ಭರವಸೆ ಮಾತ್ರ ಸೋಮವಾರವೂ ಯಾವ ಅಧಿಕಾರಿಗಳಿಂದಲೂ ಸಿಗಲಿಲ್ಲ. ಕುಟುಂಬದ ವಿಭಿನ್ನ ಬೇಡಿಕೆರಿತ್ತಿ ಕುಟುಂಬದ ಸದಸ್ಯರು ಸೋಮವಾರ ಕನ್ನಡಪ್ರಭದೊಂದಿಗೆ ಮಾತನಾಡಿ, ನಮಗೆ ಆ ಚಿನ್ನ ಬೇಡ ಆ ಜಾಗದಲ್ಲಿ ದೋಷವಿದೆ (ಅಪಶಕುನ). ಅಲ್ಲಿ ದೊಡ್ಡ ಸರ್ಪ ಕಂಡಿದ್ದು, ನಮಗೆ ಭಯವಾಗುತ್ತಿದೆ. ಆ ಜಾಗವನ್ನು ಸರ್ಕಾರವೇ ವಶಕ್ಕೆ ಪಡೆದು ದೇವಸ್ಥಾನ ನಿರ್ಮಿಸಲಿ. ನಮಗೆ ವಾಸಿಸಲು ಒಂದು ಸೂರು ಹಾಗೂ ಮಗನಿಗೆ ಉದ್ಯೋಗ ನೀಡಿದರೆ ಸಾಕು ಎಂದು ಮನವಿ ಮಾಡಿದ್ದಾರೆ.
ಶ್ಲಾಘನೀಯ: ರಿತ್ತಿ ಕುಟುಂಬದವರು ತಮ್ಮ ಕಡು ಬಡತನದಲ್ಲೂ ಇಷ್ಟು ದೊಡ್ಡ ಮೊತ್ತದ ಬಂಗಾರವನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಅತ್ಯಂತ ಶ್ಲಾಘನೀಯ. ಅವರಿಗೆ ಮನೆ ಒದಗಿಸುವ ಹಾಗೂ ನೆಮ್ಮದಿಯ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುತ್ತೇನೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.