ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಮನೆ, ಮಠ ಕಳೆದುಕೊಂಡು ಪುನರ್ವಸತಿ ಪಡೆದ ನಂದಿಬಂಡಿ, ಡಣನಾಯಕನಕೆರೆ ಗ್ರಾಮಗಳ ರೈತರಿಗೆ ಜಮೀನುಗಳ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಮರಿಯಮ್ಮನಹಳ್ಳಿ ಹೋಬಳಿ ಘಟಕದಿಂದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ನಂದಿಬಂಡಿ, ಡಣನಾಯಕನಕೆರೆ ಗ್ರಾಮಗಳ ಕೆಲ ರೈತರಿಗೆ ಹಕ್ಕುಪತ್ರ ಕೊಟ್ಟರೂ ಅವರ ಜಮೀನನ್ನು ಕೆಐಎಡಿಬಿ ಮುಖಾಂತರ ವಸಪಡಿಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ನಿಲ್ಲಿಸಬೇಕು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ರೈತರ ಸಾಗುವಳಿ ಮಾಡುವ ಜಮೀನುಗಳಿಗೆ, ಅಕ್ರಮ-ಸಕ್ರಮ ಯೋಜನೆಯಲ್ಲಿ ಫಾರಂ 50,53,57 ಅರ್ಜಿ ಸಲ್ಲಿಸಿದ ಎಲ್ಲ ರೈತರಿಗೆ ಹಕ್ಕುಪತ್ರ ನೀಡಬೇಕು. ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3300 ಕೊಡಬೇಕೆಂದು ಆದೇಶ ಮಾಡಿದ್ದರೂ ಬಳ್ಳಾರಿ, ವಿಜಯನಗರ, ದಾವಣಗೆರೆ ಜಿಲ್ಲೆಗಳ ಕಾರ್ಖಾನೆಗಳ ಮಾಲೀಕರು ಪ್ರತಿ ಟನ್ ಕಬ್ಬಿಗೆ ಕೇವಲ ₹2700 ಕೊಟ್ಟಿರುತ್ತಾರೆ. ಸರ್ಕಾರ ₹3300 ಕೊಡಿಸಬೇಕು. ಹಗರಿಬೊಮ್ಮನಹಳ್ಳಿ ತಾಲೂಕಿನ ಏತ ನೀರಾವರಿ ಯೋಜನೆಗಳು (ನಂದಿದುರ್ಗ, ಚಿಲಗೋಡು, ಮರಬ್ಬಿಹಾಳು) ಜಾರಿಗೆ ಈ ಸಾರಿ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಜ.26ರಂದು ಉಸ್ತುವಾರಿ ಮಂತ್ರಿ ಜಮೀರ್ ಅಹಮದ್ ಖಾನ್ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಇದಕ್ಕೇನಾದರೂ ತಡೆಯೊಡ್ಡಿದರೆ ಫೆಬ್ರವರಿ 5ರಂದು ಮರಿಯಮ್ಮನಹಳ್ಳಿ ಹೋಬಳಿಯ ರಾಷ್ಟ್ರೀಯ ಹೆದ್ದಾರಿ ಡಣಾಪುರ ಹತ್ತಿರ ರಸ್ತೆ ತಡೆ ಚಳವಳಿ ಮಾಡುತ್ತೇವೆ. ಆಗ ರೈತರಿಗೆ ಆಗುವ ಸಮಸ್ಯೆಗಳಿಗೆ ಸರ್ಕಾರವೇ ನೇರ ಹೊಣೆ ಆಗಲಿದ್ದು, ಇದಕ್ಕೆ ಅವಕಾಶ ಕೊಡದೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸರ್ಕಾರದ ಜೊತೆ ಮಾತುಕತೆಗೆ ಅವಕಾಶ ಮಾಡಿ ಕೊಡುತ್ತೇವೆಂದು ನಮಗೆ ಅಧಿಕೃತ ಪತ್ರ ಕೊಡಬೇಕು ಎಂದು ರೈತರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಪತ್ರದಲ್ಲಿ ಉಲ್ಲೇಖಿಸಿದ್ದಾರೆ.ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಗೋಣಿಬಸಪ್ಪ, ಮುಖಂಡರಾದ ಬಾಣದ ಶಿವಪ್ಪ, ಇಬ್ರಾಹಿಂ ಸಾಬ್, ಗಂಟೆ ಸೋಮಶೇಖರ್, ಬಸವನಗೌಡ, ಕೆ.ಯಮನೂರಪ್ಪ, ಹುಸೇನಸಾಬ್, ಮೃತ್ಯುಂಜ್ಯಯ, ದೊಡ್ಡ ಹುಲಗಪ್ಪ ಪರುಶುರಾಮ, ಹುಲುಗಪ್ಪ, ಅಂಗಡಿ ಹುಲುಗಪ್ಪ, ಪುಷ್ಪಾವತಿ ಮತ್ತಿತರರಿದ್ದರು.