ಬಜೆಟ್‌ನಲ್ಲಿ ಕಂಬಳಕ್ಕೆ 2 ಕೋಟಿ ರು. ಅನುದಾನ ಮೀಸಲಿಗೆ ಅಸೋಸಿಯೇಷನ್‌ ಒತ್ತಾಯ

KannadaprabhaNewsNetwork |  
Published : Oct 13, 2025, 02:03 AM IST
ಡಾ.ಐಕಳಬಾವ ದೇವಿಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಕಂಬಳ ನಡೆಸಲು ಬಜೆಟ್‌ನಲ್ಲಿ 2 ಕೋಟಿ ರು. ಮೊತ್ತ ಮೀಸಲಿರಿಸುವಂತೆ ರಾಜ್ಯ ಕಂಬಳ ಅಸೋಸಿಯೇಷನ್‌ ಮುಖ್ಯಮಂತ್ರಿಗಳನ್ನು ಮನವಿ ಮಾಡಿದೆ.

ಮಂಗಳೂರು: ಜನಪ್ರಿಯ ಜಾನಪದ ಕ್ರೀಡೆ ಕಂಬಳ ನಡೆಸಲು ಬಜೆಟ್‌ನಲ್ಲಿ 2 ಕೋಟಿ ರು. ಮೊತ್ತ ಮೀಸಲಿರಿಸುವಂತೆ ರಾಜ್ಯ ಕಂಬಳ ಅಸೋಸಿಯೇಷನ್‌ ಮುಖ್ಯಮಂತ್ರಿಗಳನ್ನು ಮನವಿ ಮಾಡಿದೆ.

ಮಂಗಳೂರಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ ಅಧ್ಯಕ್ಷ ಡಾ.ಐಕಳಬಾವ ದೇವೀಪ್ರಸಾದ್‌ ಶೆಟ್ಟಿ, ಬಜೆಟ್‌ನಲ್ಲಿ ಈ ಮೊತ್ತ ಮೀಸಲಿರಿಸಿ ಕಂಬಳ ಆಯೋಜಕರಿಗೆ ಒದಗಿಸಿದರೆ ಕಂಬಳಕ್ಕೆ ಪೂರಕ ಯೋಜನೆ ರೂಪಿಸಲು ಅನುಕೂಲವಾಗಲಿದೆ ಎಂದರು.

ಈ ಹಿಂದೆ ಒಂದು ಕಂಬಳ ನಡೆಸಲು 5 ಲಕ್ಷ ರು. ನೀಡಲಾಗಿತ್ತು. ಈ ಬಾರಿ 2 ಲಕ್ಷ ರು. ಅನುದಾನ ನೀಡಲಾಗುತ್ತಿದೆ. 2 ಕೋಟಿ ರು. ಮೀಸಲಿರಿಸಿದರೆ ಒಂದು ಕಂಬಳಕ್ಕೆ ತಲಾ 8 ಲಕ್ಷ ರು.ನಂತೆ ಒಟ್ಟು 25 ಕಂಬ‍ಳಗಳಿಗೆ ಅನುದಾನ ನೀಡಲು ಸಾಧ್ಯವಾಗಲಿದೆ. ಈ ಬಗ್ಗೆ ಪುತ್ತೂರು ಶಾಸಕ ಅಶೋಕ್‌ ರೈ ನೇತೃತ್ವದಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ, ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಮುಂದಿನ ಬಾರಿ ಮೈಸೂರಲ್ಲಿ ಕಂಬಳ: ಈ ಬಾರಿ ಕಂಬಳದ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಮೂಡುಬಿದಿರೆ ಮತ್ತು ಮೀಯಾರು ಸರ್ಕಾರದ ಕಂಬಳ, ಇದನ್ನು ಹೊರತುಪಡಿಸಿದರೆ ಪಿಲಿಕುಳ ಕಂಬಳ ವಿಚಾರ ಕೋರ್ಟ್‌ನಲ್ಲಿದೆ. ಬೆಂಗಳೂರಿನಲ್ಲಿ ಎರಡು ವರ್ಷ ಹಿಂದೆ ಕಂಬಳ ನಡೆದದ್ದು ಬಿಟ್ಟರೆ, ಈ ವರ್ಷ ನಡೆದಿಲ್ಲ. ಶಿವಮೊಗ್ಗ, ಮುಂಬೈ ಮತ್ತಿತರ ಕಡೆಗಳಲ್ಲಿ ಕಂಬಳ ನಡೆಸುವಂತೆ ಬೇಡಿಕೆ ಬಂದಿದೆ. ಮುಂದಿನ ವರ್ಷ ಮೈಸೂರಿನಲ್ಲಿ ಕಂಬ‍ಳ ನಡೆಯುವ ಸಾಧ್ಯತೆ ಇದೆ. ಈ ಬಾರಿ ಹರೇಕಳ ಮತ್ತು ಬಡಗಬೆಟ್ಟುವಿನಲ್ಲೂ ಕಂಬಳ ನಡೆಯಲಿದೆ ಎಂದರು. ಕಾರ್ಯದರ್ಶಿ ವಿಜಯ ಕುಮಾರ್‌ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್‌ ಶೆಟ್ಟಿ ಮುಚ್ಚೂರು ಇದ್ದರು. ಕಂಬಳಕ್ಕೆ ಐಪಿಎಲ್‌ ಮಾದರಿ ಪ್ರಾಯೋಜಕತ್ವ ಯೋಜನೆ

ಕಂಬಳ ಸಮಿತಿಯು ಮುಂದಿನ ವಾರ ಮಂಗಳೂರಲ್ಲಿ ಸಭೆ ಸೇರಲಿದೆ. ಮುಂದಿನ ದಿನಗಳಲ್ಲಿ ಕಂಬಳ‍ ನಡೆಸುವ ಕುರಿತಂತೆ ರೂಪುರೇಷೆಗಳನ್ನು ಕೈಗೊಳ್ಳಲಾಗುತ್ತದೆ. ಇದರಲ್ಲಿ ಕಂಬಳವನ್ನು ಐಪಿಎಲ್‌ ಮಾದರಿ ಪ್ರಾಯೋಜಕತ್ವದಲ್ಲಿ ನಡೆಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ರಾಜ್ಯ ಕಂಬಳ ಆಯೋಜಕರಿಗೆ ಸಹಕಾರ, ಪ್ರತಿ ಕಂಬಳಗಳು ಕ್ರೀಡಾ ಪ್ರಾಧಿಕಾರದ ಲಾಂಛನದ ಅಡಿಯಲ್ಲಿ ನಡೆಯುವುದು, ಕಂಬಳವನ್ನು ನಿಗದಿತ ವೇಳೆಯಲ್ಲಿ ನಡೆಸುವುದು. ಕಂಬಳ ಓಟಗಾರರಿಗೆ, ತೀರ್ಪುಗಾರರಿಗೆ, ಕಾರ್ಮಿಕರಿಗೆ ಸರ್ಕಾರದಿಂದ ಭತ್ಯೆ ಮತ್ತು ಆರೋಗ್ಯ ವಿಮೆ ಒದಗಿಸುವುದು, ಕಂಬಳದ ಅಧಿಕೃತ ಧ್ವಜ ಮತ್ತು ಲಾಂಛನ ರಚನೆ. ಕಂಬಳ ಆಯೋಜಕರು ನಡೆಸುವ ಕಂಬಳಕ್ಕೆ ಅಸೋಸಿಯೇಷನ್‌ಮೂಲಕವೇ ಅನುಮತಿ ಪಡೆಯುವುದು. ಇದರ ಮೂಲಕವೇ ಸರ್ಕಾರದ ಅನುದಾನ ಹಂಚಿಕೆ ಮಾಡುವುದು. ಕಂಬಳದ ಬೈಲಾ, ನೀತಿ, ನಿಯಮಗಳನ್ನು ಕಾಲಕಾಲಕ್ಕೆ ತಕ್ಕಂತೆ ರೂಪಿಸುವ ಜವಾಬ್ದಾರಿ ರಾಜ್ಯ ಕಂಬಳ ಅಸೋಸಿಯೇಷನ್‌ನದ್ದು. ಈಗಾಗಲೇ ಬೈಲಾ ರಚನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ವಾರ್ಷಿಕ ಮಹಾಸಭೆ, ಆಡಿಟ್‌ ಕ್ಯಾಲೆಂಡರ್‌ ಆಫ್‌ ಈವೆಂಟ್‌ ಮತ್ತು ಅಸೋಸಿಯೇಷನ್‌ ಕಾರ್ಯ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ಅಸೋಸಿಯೇಷನ್‌ ಅಧ್ಯಕ್ಷ ಡಾ.ಐಕಳಬಾವ ದೇವೀಪ್ರಸಾದ್‌ ಶೆಟ್ಟಿ ತಿಳಿಸಿದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ