ಪತ್ರಕರ್ತರ ನೋವಿಗೆ ಸ್ಪಂದಿಸಲು ಸಂಘ ಸ್ಥಾಪನೆ: ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್

KannadaprabhaNewsNetwork | Published : Jul 12, 2024 1:34 AM

ಸಾರಾಂಶ

ಪತ್ರಕರ್ತರಿಗೆ ಗಂಭೀರವಾದ ಕಾಯಿಲೆ, ಅಪಘಾತ, ಸಾವು- ನೋವುಗಳಂತಹ ಸಮಸ್ಯೆಗಳು ಉಂಟಾದಾಗ 10 ಲಕ್ಷ ರು.ಗಳಂತಹ ದೊಡ್ಡ ಮೊತ್ತವನ್ನು ನೀಡುವ ಮೂಲಕ ನೆರವಾಗಲಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಸದಸ್ಯರಿಂದ ಮಾಸಿಕ 100 ರುಪಾಯಿಗಳ ವಂತಿಗೆಯನ್ನು ಸಂಗ್ರಹ ಮಾಡುವ ಮೂಲಕ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿ, ಗಂಭೀರ ಸಮಸ್ಯೆಗೆ ಒಳಗಾಗುವ ಸಂಘದ ಸದಸ್ಯರಿಗೆ ತಲಾ 10 ಲಕ್ಷ ರುಪಾಯಿಗಳನ್ನು ನೀಡಲಾಗುವುದು ಎಂದು ಕಾರ್ಯನಿರತ ಪತ್ರಕರ್ತರ ಧ್ವನಿಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ತಿಳಿಸಿದರು.

ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕು ಶಾಖೆ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಪತ್ರಕರ್ತರಿಗೆ ಗಂಭೀರವಾದ ಕಾಯಿಲೆ, ಅಪಘಾತ, ಸಾವು- ನೋವುಗಳಂತಹ ಸಮಸ್ಯೆಗಳು ಉಂಟಾದಾಗ 10 ಲಕ್ಷ ರು.ಗಳಂತಹ ದೊಡ್ಡ ಮೊತ್ತವನ್ನು ನೀಡುವ ಮೂಲಕ ನೆರವಾಗಲಿದೆ ಎಂದರು.

ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ನೂತನ ಸಂಘವನ್ನು ಸ್ಥಾಪನೆ ಮಾಡಲಾಯಿತು. ಪ್ರಸ್ತುತ 3000 ಸದಸ್ಯತ್ವ ನೋಂದಾಯಿಸಿಕೊಳ್ಳಲಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಡಾ.ಕೆ.ಪಿ.ನಾರಾಯಣಪ್ಪ ಮಾತನಾಡಿ, ಪತ್ರಿಕೆಗಳು ವಸ್ತುನಿಷ್ಠ ವರದಿಗಳನ್ನು ಮಾಡಬೇಕೆಂದು ಸಮಾಜ ಬಯಸುತ್ತದೆ. ಆದರೆ ವಸ್ತುನಿಷ್ಠ ವರದಿಗಳನ್ನು ಮಾಡಲು ಹೊರಟ ಹಲವು ಮಂದಿ ಪತ್ರಕರ್ತರು ಸಮಸ್ಯೆಗಳಿಗೆ ಒಳಗಾಗಿದ್ದಾರೆ ಎಂದರು.

ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿರುವ ಪತ್ರಿಕಾ ರಂಗದಲ್ಲಿ ನಿಷ್ಠೆಯಿಂದ ಕೆಲಸ ಮಾಡಲು ಹೊರಟವರಿಗೆ ಹಲವು ಬಗೆಯ ಸವಾಲು ಎದುರಾಗುತ್ತವೆ ಎಂದ ಅವರು, ತಮಗೆ ಎದುರಾದ ಸಮಸ್ಯೆಗಳನ್ನು ಉದಾಹರಣೆಗಳೊಂದಿಗೆ ತಿಳಿಸಿದರು.

ಸಮಸ್ಯೆಗಳಿದ್ದರೂ ನೊಂದವರ ಧ್ವನಿಯಾಗಿ ಸಮತೋಲನವನ್ನು ಕಾಪಾಡಿಕೊಂಡು ಪ್ರಾಮಾಣಿಕವಾಗಿ ಪತ್ರಕರ್ತರು ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು.

ಕೆಎಚ್‌ಪಿ ಮುಖಂಡ ಶ್ರೀನಿವಾಸಗೌಡ ಮಾತನಾಡಿ, ಪತ್ರಿಕೆಯೊಂದು ವರದಿ ಮಾಡಿದ್ದ ಆರೋಗ್ಯ ಸಮಸ್ಯೆಯನ್ನು ನಮ್ಮ ಫೌಂಡೇಷನ್ ಗಂಭೀರವಾಗಿ ಪರಿಗಣಿಸಿ ಆರ್ಥಿಕ ನೆರವು ನೀಡಿತು. ಹೀಗೆ ಪತ್ರಿಕೆಗಳು ಸಮಾಜಮುಖಿ ಕೆಲಸ ಮಾಡುವ ಮೂಲಕ ಬಡವರ ಬಾಳಿನಲ್ಲಿ ಬೆಳಕು ಚೆಲ್ಲಬೇಕೆಂದರು.

ಸಂಘದ ತಾಲೂಕು ಅಧ್ಯಕ್ಷ ಎಚ್.ಬಿ.ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಾಧ್ಯಕ್ಷ ಸಿದ್ಧಪ್ಪ, ಉಪಾಧ್ಯಕ್ಷ ಟಿ.ವಿ.ಮಂಜುನಾಥ, ಅರುಣಕುಮಾರ್, ಲೇಪಾಕ್ಷಿ ಸಂತೋಷರಾವ್, ಸುರೇಶ್‌ಬಾಬು, ಸುಪ್ರಿಯ, ನವೀನ್‌ಕುಮಾರ್ ಇದ್ದರು.

ಹಿರಿಯ ಪತ್ರಕರ್ತರನ್ನು ಮತ್ತು ವಿವಿಧ ಸಂಘಟನೆಗಳ ಮುಖಂಡರನ್ನು ಸನ್ಮಾನಿಸಲಾಯಿತು.

Share this article