ಕೊಪ್ಪಳ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಪದಗ್ರಹಣ ಕಾರ್ಯಕ್ರಮ

KannadaprabhaNewsNetwork |  
Published : Oct 03, 2026, 02:15 AM IST
ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜನ ನಾಗಪ್ಪ ಅವರಿಗೆ ನಿಕಟಪೂರ್ವ ಅಧ್ಯಕ್ಷ ಅಮರೇಗೌಡ ಭಯ್ಯಾಪುರ ಅವರು ಕಾಂಗ್ರೆಸ್ ಧ್ವಜ ಹಸ್ತಾಂತರಿಸಿದರು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಶುಕ್ರವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಜಿಲ್ಲೆಯ ಕಾಂಗ್ರೆಸ್‌ನ ಬಹುತೇಕ ಪ್ರಮುಖ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪಕ್ಷದ ಒಗ್ಗಟ್ಟು ಪ್ರದರ್ಶಿಸಿದರು.

ಕೊಪ್ಪಳ: ಕೊಪ್ಪಳ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಶುಕ್ರವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಜಿಲ್ಲೆಯ ಕಾಂಗ್ರೆಸ್‌ನ ಬಹುತೇಕ ಪ್ರಮುಖ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪಕ್ಷದ ಒಗ್ಗಟ್ಟು ಪ್ರದರ್ಶಿಸಿದರು.

ಬರುವ ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು, ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಕರೆ ನೀಡಿದರು. ಜತೆಗೆ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸುವ ಪ್ರಯತ್ನಗಳ ವಿರುದ್ಧ ಗಟ್ಟಿಯಾಗಿ ಹೋರಾಟ ನಡೆಸುವ ಬಗ್ಗೆಯೂ ನಾಯಕರು ಮಾತನಾಡಿದರು.

ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಕಾಂಗ್ರೆಸ್ ಇತಿಹಾಸ ಪ್ರಸ್ತಾಪಿಸಿ, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು ಸೇರಿದಂತೆ ಹಲವು ನಾಯಕರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ನೆಹರು ಅವರ ಅವಧಿಯಲ್ಲಿ ಕೈಗಾರಿಕೆ, ನೀರಾವರಿ, ಸಾಕ್ಷರತೆ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಗೆ ಒತ್ತು ನೀಡಲಾಯಿತು ಎಂದು ಹೇಳಿದರು.

ಮತದಾರರ ಪಟ್ಟಿಯಿಂದ ಅರ್ಹರ ಹೆಸರು ಕೈಬಿಡುವ ಯಾವುದೇ ಪ್ರಯತ್ನವನ್ನು ತಡೆಯಬೇಕು. ಈ ಸಂಬಂಧ ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಹಸಿರು ಕ್ರಾಂತಿ, ಬ್ಯಾಂಕ್ ರಾಷ್ಟ್ರೀಕರಣ, ಆಹಾರ ಭದ್ರತೆ, ಮಾಹಿತಿ ಹಕ್ಕು ಸೇರಿದಂತೆ ಹಲವು ಮಹತ್ವದ ಕ್ರಮಗಳೊಂದಿಗೆ ಕಾಂಗ್ರೆಸ್‌ನ ಇತಿಹಾಸ ಬೆಸೆದುಕೊಂಡಿದೆ ಎಂದರು.

ಎಸ್‌ಐಆರ್‌ ವಿಚಾರದಲ್ಲಿ ಕಾಂಗ್ರೆಸ್ ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ನಡೆಸುತ್ತಿದೆ. ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಅಳಿಸುವ ಪ್ರಯತ್ನಗಳ ಬಗ್ಗೆ ಪಕ್ಷ ಗಂಭೀರವಾಗಿ ಧ್ವನಿ ಎತ್ತಿದೆ. ಕೊಪ್ಪಳದಲ್ಲಿ ಸುಮಾರು 10 ಸಾವಿರ ಮತದಾರರ ಹೆಸರು ಅಳಿಸುವ ಅರ್ಜಿಗಳು ಬಂದಿವೆ ಎಂಬ ಆರೋಪಗಳಿದ್ದು, ಈ ಬಗ್ಗೆ ಪರಿಶೀಲನೆ ಅಗತ್ಯ. ರಾಜ್ಯದಲ್ಲಿ ಎಸ್‌ಐಆರ್‌ ಸಂಬಂಧಿತ ಬೃಹತ್ ಪ್ರಮಾಣದ ಫಾರಂ-7 ಅರ್ಜಿಗಳ ಕುರಿತು ಕಾಂಗ್ರೆಸ್ ದೂರು ನೀಡಿರುವ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಕಾನೂನು ಕ್ರಮದ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಅಮರೆಗೌಡ ಬಯ್ಯಾಪುರ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣವಾಗಬೇಕಿದ್ದು, ಎಲ್ಲರೂ ತನು, ಮನ, ಧನದಿಂದ ನೆರವು ನೀಡಬೇಕು. ಮುಂದಿನ ಗಾಂಧಿ ಜಯಂತಿಯ ವೇಳೆಗೆ ಕಟ್ಟಡ ಉದ್ಘಾಟನೆಯಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಂತಹ ನಾಯಕರು ಕಾಂಗ್ರೆಸ್ ಮೂಲಕ ದೇಶಕ್ಕಾಗಿ ಹೋರಾಡಿದ್ದಾರೆ. ಇಂದಿರಾ ಗಾಂಧಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಹಾಗೂ 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸಿದರು. ಮನಮೋಹನ್ ಸಿಂಗ್ ನೇತೃತ್ವದಲ್ಲಿ ನರೇಗಾ, ಕಡ್ಡಾಯ ಶಿಕ್ಷಣ, ಮಾಹಿತಿ ಹಕ್ಕು ಹಾಗೂ ಆಹಾರ ಭದ್ರತಾ ಕಾಯ್ದೆಗಳಂತಹ ಕ್ರಮಗಳು ಜಾರಿಯಾದವು ಎಂದರು.

ಮಾಜಿ ಶಾಸಕ ಎಚ್.ಆರ್. ಶ್ರೀನಾಥ್ ಮಾತನಾಡಿ, ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು. ಸಚಿವರು ತಮ್ಮ ಕ್ಷೇತ್ರಗಳ ಜತೆಗೆ ಜಿಲ್ಲೆಯ ಇತರ ಕ್ಷೇತ್ರಗಳ ಕಾರ್ಯಕರ್ತರ ಸಮಸ್ಯೆಗಳಿಗೂ ಸ್ಪಂದಿಸಬೇಕು ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಆರ್ಥಿಕ ಸ್ಥಿತಿಗೆ ನೆರವಾಗಿವೆ. ಪಕ್ಷದ ಕಾರ್ಯಕರ್ತರು ಚಟುವಟಿಕೆಯಿಂದ ಇದ್ದಾಗ ಮಾತ್ರ ಸರ್ಕಾರ ಹಾಗೂ ಪಕ್ಷ ಬಲಿಷ್ಠವಾಗಿರಲು ಸಾಧ್ಯ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾಜಿ ಶಾಸಕ ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್, ಎಸ್.ಬಿ. ನಾಗರಳ್ಳಿ, ಕೃಷ್ಣ ಇಟ್ಟಂಗಿ ಅಮ್ಜದ್ ಪಟೇಲ್, ಯಂಕಣ್ಣ ಯರಾಶಿ, ಹಸನಸಾಬ್ ದೋಟಿಹಾಳ, ಶೈಲಜಾ, ಕಾಟನ್ ಪಾಷಾ, ಆಸೀಫ್ ಅಲಿ, ಮಾಲತಿ ನಾಯಕ್, ಕೆ.ಎಂ. ಸೈಯದ್, ಗಾಳೆಪ್ಪ ಪೂಜಾರ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಭದ್ರಕೋಟೆ ಮಾಡುತ್ತೇನೆ: ಕೊಪ್ಪಳವನ್ನು ಕಾಂಗ್ರೆಸ್ ಭದ್ರಕೋಟೆ ಮಾಡುತ್ತೇನೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಹೇಳಿದರು. ಜಿಲ್ಲಾಧ್ಯಕ್ಷ ಸ್ಥಾನ ವಹಿಸಿಕೊಂಡು ಮಾತನಾಡಿದ ಅವರು, ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡುವುದಿಲ್ಲ. ಪಕ್ಷದ ನಾಯಕರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳದೆ, ಪಕ್ಷದ ನಾಲ್ಕು ಗೋಡೆಯ ಮಧ್ಯೆ ಹೇಳಬೇಕು. ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು ಎಂದರು.

ಇಕ್ಬಾಲ್ ಅನ್ಸಾರಿ ಗೈರು: ನಿರೀಕ್ಷೆಯಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗೈರುಹಾಜರಾಗಿದ್ದರು. ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡು ಆಡಿಯೋ ಬಿಡುಗಡೆ ಮಾಡುತ್ತಲೇ ಇರುವ ಅವರು ಸಭೆಗೆ ಬರಲೇ ಇಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯಕೀಯ ಕ್ಷೇತ್ರದಲ್ಲಿ ದೇಶಕ್ಕೆ ಜಿಲ್ಲೆ ಮಾದರಿ: ಡಾ. ಬೊಮ್ಮನಹಳ್ಳಿ
ಸಮಾಜದ ಎಲ್ಲ ಒಳಪಂಗಡಗಳ ಒಗ್ಗೂಡಿಸುವಿಕೆ ಮೊದಲ ಆದ್ಯತೆ: ನಿರಾಣಿ