ಕನ್ನಡಪ್ರಭವಾರ್ತೆ ಮೂಲ್ಕಿ
ಜ್ಯೋತಿಷ್ಯ ಶಾಸ್ತ್ರ ಎಂಬುದು ಮಹಾನ್ ಶಾಸ್ತ್ರ. ಅಜ್ಞಾತವಾಗಿದ್ದನ್ನು ಇನ್ನು ಮುಂದೆ ಬರುವುದನ್ನು ಹೇಳುವಂತಹ ಅದ್ಭುತವಾದುದು ಜ್ಯೋತಿಷ್ಯ. ಅದನ್ನು ಹೇಳುವವರು ದುಡ್ಡು ಮಾಡುವ ದಂಧೆಯನ್ನಾಗಿಸಿಕೊಂಡು ನೊಂದವರನ್ನು, ಸೋತವರನ್ನು ಮೋಸ ಮಾಡುವುದು, ಸುಲಿಗೆ ಮಾಡುವುದು ಸರಿಯಲ್ಲ ಎಂದು ಜ್ಯೋತಿಷಿ, ನಿವೃತ್ತ ಉಪನ್ಯಾಸಕ, ಬರಹಗಾರ ಬಿ. ರಾಮಚಂದ್ರ ಆಚಾರ‍್ಯ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಶ್ರಯದಲ್ಲಿ ಬಳ್ಕುಂಜೆಯ ಕುಕ್ಕಟ್ಟೆಯ ದೇವದಾಸ ಮಲ್ಯರ ಮನೆಯ ಅಂಗಳದಲ್ಲಿ ಆಯೋಜಿಸಿದ ಜ್ಯೌತಿಷ್ಯ ಮತ್ತು ಸಾಹಿತ್ಯ ಸಂವಾದ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ಜಾತಕ ಟ್ಯಾಲಿ ನೋಡುವ ಬಗ್ಗೆ ಮೂಲ ಜ್ಯೋತಿಷ್ಯದಲ್ಲಿ ಇಲ್ಲ. ಕಾಳಸರ್ಪಯೋಗ ಎಂಬುದು ಜ್ಯೋತಿಷ್ಯ ಗ್ರಂಥದಲ್ಲಿ ಇಲ್ಲ. ಅದೊಂದು ದೊಡ್ಡ ದೋಷವೂ ಅಲ್ಲ. ಹಾಗಾಗಿ ಅದಕ್ಕೆ ಪರಿಹಾರವೂ ಇಲ್ಲ. ಜ್ಯೋತಿಷ್ಯ ಹೇಳುವುದೆಂದರೆ ಹೆದರಿಸುವುದು ಅಲ್ಲ. ದೊಡ್ಡ ದೊಡ್ಡ ಹೋಮ ಪೂಜೆ, ಶಾಂತಿ ಪರಿಹಾರ ಹೇಳಿದರೆ ದೊಡ್ಡ ಜ್ಯೋತಿಷಿ, ಹಣ್ಣುಕಾಯಿ ಕೊಡಿ, ನಿಮ್ಮ ಮೂಲಸ್ಥಾನಕ್ಕೆ ಹೋಗಿ ಕೈಮುಗಿದು ಬನ್ನಿ ಎಂದು ಸಣ್ಣ ಸಣ್ಣ ಪರಿಹಾರ ಹೇಳಿದರೆ ಆ ಜ್ಯೋತಿಷಿ ಸರಿಯಿಲ್ಲ ಎಂಬ ಅಭಿಪ್ರಾಯ ಜನರಲ್ಲಿದೆ. ಜ್ಯೋತಿಷಿಗಳಿಗೆ ದೇವತಾ ಉಪಾಸನೆ ಅತ್ಯಂತ ಅಗತ್ಯವಾಗಿದೆ , ಮನೆಯಲ್ಲಿ ಪ್ರೀತಿಯ ವಾತಾವರಣ ಇದ್ದರೆ ಸಾತ್ವಿಕ ಶಕ್ತಿಗಳು ಇರುತ್ತವೆ. ಸದಾ ಜಗಳವಾಡುವುದು, ಕೆಟ್ಟದಾಗಿ ಬೈಯುತ್ತಿರುವುದು ಸರಿಯಲ್ಲ. ವಾಕ್ ಸಿದ್ದಿ, ಮಾಟ ಮಂತ್ರ ಇರುವುದು ಹೌದು. ಅಂಜನ ನೋಡುವುದು ಸತ್ಯ. ಸಣ್ಣ ಸಣ್ಣ ವಿಷಯಗಳಿಗೆ, ಕುಟುಂಬದ ಸಮಸ್ಯೆಗಳಿಗೆ ಅಷ್ಟಮಂಗಲ ಪ್ರಶ್ನೆ ಇಟ್ಟು ಲಕ್ಷಗಟ್ಟಲೆ ಖರ್ಚು ಮಾಡಬೇಕೆಂದಿಲ್ಲ ಎಂದು ರಾಮಚಂದ್ರ ಆಚಾರ‍್ಯ ಹೇಳಿದರು.ಈ ಸಂದರ್ಭ ಡಾ. ಬಿ. ಜನಾರ್ದನ ಭಟ್, ಬಿ.ಸೀತಾರಾಮ ಭಟ್, ಜನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ, ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ವೀಣಾ ಶಶಿಧರ್, ದೇವದಾಸ ಮಲ್ಯ, ಹೆರಿಕ್ ಪಾಯಸ್, ಮಾಧವ ಕೆರೆಕಾಡು ಮತ್ತಿತರರಿದ್ದರು.