ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚಿನ ಮಳೆಗೆ ರಸ್ತೆಯ ಗುಂಡಿಯಲ್ಲಿ ನೀರು ನಿಂತು ಮಣ್ಣು ಕುಸಿದು ಗುಂಡಿ ನಿರ್ಮಾಣವಾಗಿತ್ತು. ಈ ಗುಂಡಿಯಲ್ಲಿ ಕಾರೊಂದರ ಚಕ್ರ ಸಿಕ್ಕಿ ಬಿದ್ದಿತ್ತು. ಕಾರನ್ನು ಗುಂಡಿಯಿಂದ ಹೊರ ತೆಗೆಯಲು ಕಾರು ಚಾಲಕ ಮತ್ತು ಇತರರ ಪ್ರಯತ್ನಿಸುತ್ತಿದ್ದರು. ಅದೇ ವೇಳೆಗೆ ಅಲ್ಲಿಗೆ ಬಂದ ಆಟೋವೊಂದರ ಮುಂದಿನ ಚಕ್ರ ಅಲ್ಲಿನ ಮತ್ತೊಂದು ಗುಂಡಿಯಲ್ಲಿ ಸಿಲುಕಿದೆ. ಅದೇ ಸಮಯಕ್ಕೆ ಮತ್ತೊಂದು ಕಡೆಯಿಂದ ಮಹಿಳೆಯೊಬ್ಬರ ಸ್ಕೂಟರ್ ಬಂದಿದ್ದು, ಅದು ಕೂಡ ಪಕ್ಕದ ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡಿದೆ.ಕೊನೆಗೂ ಹರಸಾಹಸ ಪಟ್ಟು ವಾಹನಗಳನ್ನು ಗುಂಡಿಯಿಂದ ತೆಗೆದ ಬಳಿಕ ಸ್ಥಳೀಯರೇ ಗುಂಡಿಗಳಿಗೆ ಕಲ್ಲು ಮಣ್ಣು ಹಾಕಿ ಗುಂಡಿ ಮುಚ್ಚಿದ್ದಾರೆ. ರಸ್ತೆಯಲ್ಲಿನ ಗುಂಡಿಗಳಲ್ಲಿ ವಾಹನಗಳು ಸಿಕ್ಕಿ ಹಾಕಿಕೊಂಡಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಸ್ತೆಗಳ ಅದ್ವಾನ ಸ್ಥಿತಿಯ ಕುರಿತು ಸಾರ್ವಜನಿಕರು ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಆಯುಕ್ತರಿಗೆ ತರಾಟೆ:ರಸ್ತೆ ಗುಂಡಿ ಮುಚ್ಚುವ ವಿಚಾರವಾಗಿ ಪಶ್ಚಿಮ ನಗರ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ಅವರನ್ನು ಸ್ಥಳೀಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ಬುಧವಾರ ಲಗ್ಗೆರೆ ಬಳಿಯ ಕಂಠೀರವ ಸ್ಟುಡಿಯೋ ಬಳಿ ನಡೆದಿದೆ. ದೊಡ್ಡ ಗುಂಡಿ ಸೃಷ್ಟಿಯಾಗಿದ್ದ ಮಾಹಿತಿ ಆಧರಿಸಿ ಜಿಬಿಎ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಅದೇ ಮಾರ್ಗದಲ್ಲಿ ಬರುತ್ತಿದ್ದ ಆಯುಕ್ತರು, ಕೆಳಗೆ ಇಳಿದು ಸ್ಥಳೀಯರ ದೂರು ಆಲಿಸಲು ಮುಂದಾಗಿದ್ದಾರೆ. ಈ ವೇಳೆ ಕುಪಿತಗೊಂಡ ಸ್ಥಳೀಯರು ಗುಂಡಿ ಮುಚ್ಚಿ ಒಂದು ರಸ್ತೆಯನ್ನು ಸುಸ್ಥಿತಿಯಲ್ಲಿಡಲು ಆಗುವುದಿಲ್ಲವೇ ಎಂದು ರಾಜೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ಜೋರಾಗಿ ಪ್ರಶ್ನೆ ಮಾಡುತ್ತಿದ್ದಂತೆ ಆಯುಕ್ತ ರಾಜೇಂದ್ರ ಅವರು ಸ್ಥಳದಿಂದ ತೆರಳಿದರು.