ಧಾರವಾಡ:
ಜಿಲ್ಲೆಯ 388 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಡಿಬಿಒಟಿ ಮಾದರಿಯಲ್ಲಿ ಜಾರಿಯಲ್ಲಿರುವ ಬಹುಗ್ರಾಮ ನೀರು ಸರಬರಾಜು ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಸವದತ್ತಿಯ ವಿದ್ಯುತ್ ವಿತರಣಾ ಉಪಕೇಂದ್ರ ಹಾಗೂ ಹಿರೇಉಳ್ಳಿಗೇರಿ ಗ್ರಾಮದಲ್ಲಿ ನಿರ್ಮಿಸಿರುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಜಲ ಶುದ್ಧೀಕರಣದ ಘಟಕದ ಕಾಮಗಾರಿ ಪರಿಶೀಲಿಸಿದ ಅವರು, ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಎಲ್ ಆ್ಯಂಡ್ ಟಿ ಕಂಪನಿಯು ಗುತ್ತಿಗೆ ಆಧಾರದ ಮೇಲೆ ನಿರ್ವಹಿಸುತ್ತಿದೆ. ಇಂಟೇಕ್ ಪಾಯಿಂಟ್, ಪೈಪ್‌ಲೈನ್ ಮಾರ್ಗ ಹಾಗೂ ವಾಟರ್ ಟ್ರಿಟ್‌ಮೆಂಟ್ ಪ್ಲಾಂಟ್‌ಗಳ ನಿರ್ಮಾಣ ಕಾಮಗಾರಿಗಳು ಗುಣಮಟ್ಟದಿಂದ ಆಗಬೇಕು. ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಬೇಕು ಎಂದರು.ಪ್ರಸ್ತುತ ರೇಣುಕಾ ಜಲಾಶಯದಿಂದ ನೇರವಾಗಿ ನೀರನ್ನು ಪಂಪ್ ಮಾಡುವ ಕಾಮಗಾರಿ ಹಾಗೂ ಜಲ ಶುದ್ಧೀಕರಣ ಘಟಕದ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದೆ. ಬಾಕಿ ಕೆಲಸಗಳನ್ನು ಏಳು ದಿನಗಳೊಳಗೆ ಹಾಗೂ ಡಬ್ಲ್ಯೂಟಿಪಿ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಭುವನೇಶ ಪಾಟೀಲ ಸೂಚಿಸಿದರು. ಇದೇ ವೇಳೆ ಸವದತ್ತಿ ವಿದ್ಯುತ್ ವಿತರಣಾ ಉಪಕೇಂದ್ರಕ್ಕೆ ಭೇಟಿ ನೀಡಿದ ಅವರು, ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಪ್ರಸರಣ ರೇಖೆ ಕಾಮಗಾರಿ ಸಹ ಪರಿಶೀಲಿಸಿದರು. ಸಂಬಂಧಿತ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಈ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಸಿಇಒ ಅವರು ನಿರ್ದೇಶಿಸಿದರು. ಯೋಜನೆಯ ಕಾರ್ಯಾನುಷ್ಠಾನದಲ್ಲಿ ವೇಗ, ಗುಣಮಟ್ಟ ಹಾಗೂ ಸ್ಥಳೀಯ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲು ಅವರು ಸೂಚಿಸಿದರು. ಮುಂದಿನ ತಿಂಗಳೊಳಗೆ ಕನಿಷ್ಠ 50 ಹಳ್ಳಿಗಳಿಗೆ ಭಾಗಶಃ ನೀರು ಪೂರೈಕೆ (ಟ್ರಯಲ್ ರನ್) ಪ್ರಾರಂಭಿಸಲು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.ಈ ವೇಳೆ ಕಾರ್ಯನಿರ್ವಹಣಾ ಅಭಿಯಂತರರ ಜಗದೀಶ ಪಾಟೀಲ, ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಉಪಸ್ಥಿತರಿದ್ದರು.