ಮೈಸೂರು: ನಗರದ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ವನ ದುರ್ಗಾ ವೃಕ್ಷ ಶಾಂತಿ ಮಹಾಯಜ್ಞ ಮತ್ತು ಸಹಸ್ರ ಚಂಡೀಯಾಗವು ಭಾನುವಾರ ಸಂಪನ್ನಗೊಂಡಿತು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸನಾತನ ವೈದಿಕ ವಿಧಿಗಳು ಮತ್ತು ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಈ ಮಹತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಜೂ.6 ರಿಂದ ಸಹಸ್ರ ಚಂಡೀ ಯಾಗವನ್ನು ವಿಶ್ವ ರಕ್ಷಣೆ, ಸಮೃದ್ಧಿ ಹಾಗೂ ಸಾಮರಸ್ಯಕ್ಕಾಗಿ ಮತ್ತು ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಗಣಪತಿ ಶ್ರೀಗಳು ಪ್ರಾರಂಭಿಸಿದ್ದರು.ಇದು ವಿಶ್ವದಲ್ಲೇ ಮೊಟ್ಟ ಮೊದಲ ಮಹಾ ಯಾಗವೆಂಬುದು ವಿಶೇಷ. ಇತ್ತೀಚೆಗೆ ನಡೆದ ಅವಘಡಗಳು, ಯುದ್ಧಗಳು, ಸಾವು, ನೋವು ತಿಳಿದು ಗಣಪತಿ ಶ್ರೀ ಗಳು ಬಹಳ ಬೇಸರಗೊಂಡಿದ್ದರು. ಹೀಗಾಗಿ, ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ, ಲೋಕ ಕಲ್ಯಾಣಾರ್ಥವಾಗಿ ಈ ಮಹಾ ಯಾಗವನ್ನು ಎಲ್ಲೂ ಯಾವುದೇ ಲೋಪವಾಗದಂತೆ ಸಂಪನ್ನಗೊಳಿಸಿದ್ದಾರೆ.
ಗಣಪತಿ ಶ್ರೀಗಳಿಗೆ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಬೆನ್ನೆಲುಬಾಗಿ ನಿಂತು, ಎಲ್ಲಾ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.ಪ್ರಕೃತಿ ವಿಕೋಪ, ಪರಿಸರ ಅಸಮತೋಲನ ತಡೆಯುವ ದೃಷ್ಟಿ ಇಟ್ಟುಕೊಂಡು ಶ್ರೀಗಳು ವೃಕ್ಷ ಶಾಂತಿ ಮಹಾಯಜ್ಞವನ್ನು ಹಮ್ಮಿಕೊಂಡರು. ಪರಿಸರ ಸಮತೋಲನ ಸೂಚಕವಾಗಿಯೇ ಈ ವನದುರ್ಗ ವೃಕ್ಷ ಮಹಾಯಜ್ಞವನ್ನು ಕೈಗೊಂಡ ಗಣಪತಿ ಶ್ರೀಗಳು 8000 ಪವಿತ್ರ ಬೋನ್ಸಾಯ್ ವೃಕ್ಷಗಳನ್ನು ಪೂಜಿಸಿ ಸಮರ್ಪಿಸಿದ್ದಾರೆ.
ಇಡೀ ವಿಶ್ವದಲ್ಲೇ ಅತಿ ಹೆಚ್ಚು ಬೋನ್ಸಾಯ್ ವೃಕ್ಷಗಳನ್ನು ಹೊಂದಿರುವ ಖ್ಯಾತಿ ಕೂಡಾ ಅವಧೂತ ದತ್ತ ಪೀಠಕ್ಕೆ ಸಂದಿದೆ. ಹೀಗಾಗಿ, ಗಿನ್ನೀಸ್ ರೆಕಾರ್ಡ್ ಕೂಡಾ ಅವಧೂತ ದತ್ತಪೀಠಕ್ಕೆ ಸಂದಿದೆ.ಭಾನುವಾರ ಮುಂಜಾನೆ ಗಣಪತಿ ಶ್ರೀಗಳು ಮತ್ತು ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿಗಳು ಸಹಸ್ರ ಚಂಡೀಯಾಗದ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು. ಆಶ್ರಮದ ಆವರಣದಲ್ಲಿ ಈ ಮಹಾ ಯಾಗಕ್ಕಾಗಿ ನಿರ್ಮಿಸಿದ್ದ 11 ಹೋಮ ಕುಂಡಗಳ ಬಳಿಯೂ ಪೂರ್ಣಹುತಿಯನ್ನು ನೆರವೇರಿಸಿದರು. ತದನಂತರ ಪ್ರಧಾನ ಹೋಮಕುಂಡದಲ್ಲಿ ಅತಿ ಪ್ರಮುಖವಾದ ಪೂರ್ಣಾಹುತಿಯನ್ನು ನೆರವೇರಿಸಿ ಯಾಗವನ್ನು ಸಂಪನ್ನಗೊಳಿಸಿದರು.
ನಂತರ ಸಪ್ತ ಋಷಿ ಸರೋವರದಲ್ಲಿ ದೇವಿಯನ್ನು ಉತ್ಸವದಲ್ಲಿ ಕೊಂಡೊಯ್ದು ಅವಭೃತ ಸ್ನಾನ ನೆರವೇರಿಸುವ ಮೂಲಕ ಇಡೀ ಯಾಗವನ್ನು ಸಂಪನ್ನಗೊಳಿಸಲಾಯಿತು.ಇದೇ ವೇಳೆ ನೂರಾರು ಭಕ್ತರು ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿಯನ್ನು ಪಠಿಸಿದರು. ಆಶ್ರಮದ ಆವರಣದಲ್ಲಿ ಸಂಜೆ ವನದುರ್ಗ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ದೇಶಾದ್ಯಂತ ಹಲವಾರು ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ವೃಕ್ಷ ಶಾಂತಿ ಮಹಾ ಯಜ್ಞ ಮತ್ತು ವಿಶ್ವದ ಮೊಟ್ಟಮೊದಲ ಸಹಸ್ರ ಚಂಡೀಯಾಗವನ್ನು ಕಣ್ತುಂಬಿಕೊಂಡು ಪುನೀತರಾದರು.