ಹಾಕಿ ತಂಡದ ಮಾಜಿ ನಾಯಕನ ಮನೆಗೆಕನ್ನ: ಚಿನ್ನ, ಬೆಳ್ಳಿ ಪದಕ ದೋಚಿದ ಕಳ್ಳರು

KannadaprabhaNewsNetwork |  
Published : Nov 05, 2026, 03:45 AM IST
4ಕೆಆರ್ ಎಂಎನ್ 3.ಜೆಪಿಜಿಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಚಿವ ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಭಾರತದ ಹಾಕಿ ತಂಡದ ಮಾಜಿ ನಾಯಕ ಎಂ.ಎಂ.ಸೋಮಯ್ಯ ಅವರ ಮನೆಯಲ್ಲಿ ಕಳ್ಳತನವಾಗಿದ್ದು, 30 ಸಾವಿರ ರು. ಹಣ ಸೇರಿದಂತೆ 3.53 ಲಕ್ಷ ರು. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತದ ಹಾಕಿ ತಂಡದ ಮಾಜಿ ನಾಯಕ ಎಂ.ಎಂ.ಸೋಮಯ್ಯ ಅವರ ಮನೆಯಲ್ಲಿ ಕಳ್ಳತನವಾಗಿದ್ದು, 30 ಸಾವಿರ ರು. ಹಣ ಸೇರಿದಂತೆ 3.53 ಲಕ್ಷ ರು. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಂದಿರಾನಗರದ ನ್ಯೂ ತಿಪ್ಪಸಂದ್ರದ ಎಚ್‌ಎಎಲ್‌ 3ನೇ ಹಂತ ಮನೆಯೊಂದರಲ್ಲಿ ಕುಟುಂಬದೊಂದಿಗೆ ವಾಸವಿರುವ ಸೋಮಯ್ಯ ಅವರು ಅ.25 ರ ಬೆಳಗ್ಗೆ ನಗರದಿಂದ ಕೊಡಗಿಗೆ ಹೋಗಿದ್ದರು. ಆ ವೇಳೆ ಕಳ್ಳರು ಇವರ ಮನೆಯ ಮುಂಬಾಗಿಲಿನ ಬೀಗ ಮೀಟಿ ಒಳಗೆ ನುಗ್ಗಿ ಚಿನ್ನ, ಬೆಳ್ಳಿ, ಕಂಚಿನ ಪದಕ, ನಗದು, ಆಭರಣ ದೋಚಿ ಪರಾರಿಯಾಗಿದ್ದಾರೆ.

ಕಳೆದ ಅ.28 ರ ಬೆಳಗ್ಗೆ 7.30ರ ಸುಮಾರಿಗೆ ನೆರೆಮನೆಯವರಾದ ನಾರಾಯಣನ್‌ ಎಂಬುವರು, ಸೋಮಯ್ಯ ಅವರ ಮನೆಯ ಬಾಗಿಲು ನೆರೆದಿರುವುದನ್ನು ಗಮನಿಸಿ ಕಳ್ಳತನವಾಗಿರಬಹುದೆಂದು ಶಂಕಿಸಿ ಸೋಮಯ್ಯ ಅವರಿಗೆ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸೋಮಯ್ಯ ಅವರು ಕೂಡಲೇ ಕೊಡಗಿನಿಂದ ವಾಪಸ್ ಬಂದು ನೆರೆಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾಗ, ಅ.28 ರ ಬೆಳಗಿನ ಜಾವ 2.30ರ ಸುಮಾರಿಗೆ ಇಬ್ಬರು ಅಪರಿಚಿತರು ಮನೆಯ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಇಬ್ಬರ ಪೈಕಿ ಒಬ್ಬಾತ ನೀಲಿ ಬಣ್ಣದ ಶರ್ಟ್‌ ಹಾಗೂ ಮತ್ತೊಬ್ಬ ಕೆಂಪು ಬಣ್ಣದ ಶರ್ಟ್ ಧರಿಸಿದುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಸೋಮಯ್ಯ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

3.53 ಲಕ್ಷ ರು. ಮೌಲ್ಯದ ಪದಕ, ಚಿನ್ನಾಭರಣ ಕಳವು:

ಮಾಸ್ಕೋ ಒಲಿಂಪಿಕ್‌ನಲ್ಲಿ ಗೆದ್ದಿದ್ದ ಬೆಳ್ಳಿ ಪದಕ, ಸಿಯೋಲ್‌ ಏಷ್ಯನ್‌ ಗೇಮ್ಸ್‌ನಲ್ಲಿ ಗೆದ್ದಿದ್ದ ಚಿನ್ನದ ಪದಕ, ದೆಹಲಿಯಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಗೆದ್ದಿದ್ದ ಬೆಳ್ಳಿ ಪದಕ, ಸಿಯೋಲ್‌ ಏಷ್ಯನ್‌ ಗೇಮ್ಸ್‌ನಲ್ಲಿ ಗೆದ್ದಿದ್ದ ಕಂಚಿನ ಪದಕ, ಆಂಸ್ಟರ್‌ಡ್ಯಾಮ್‌ ಚಾಂಪಿಯನ್ಸ್‌ ಟ್ರೋಪಿಯಲ್ಲಿ ಗೆದ್ದಿದ್ದ ಕಂಚಿನ ಪದಕ. ತಲಾ 72 ಗ್ರಾಂ ತೂಕದ 2 ಬೆಳ್ಳಿ ಕಪ್‌ಗಳು, 10 ಗ್ರಾಂ ತೂಕದ 1 ಚಿನ್ನದ ಬಳೆ, 200 ಗ್ರಾಂನ 6 ಬೆಳ್ಳಿ ಸ್ಪೂನ್‌ಗಳು, 80 ಗ್ರಾಂನ ಬೆಳ್ಳಿ ಪಾತ್ರೆ, 8 ಗ್ರಾಂ ಚಿನ್ನದ ಕಾಯಿನ್‌ ಹಾಗೂ 30 ಸಾವಿರ ನಗದು ದೋಚಿದ್ದು, ಇವುಗಳ ಒಟ್ಟು ಮೌಲ್ಯ 3.53 ಲಕ್ಷ ರು.ಗಳೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ