ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಆತಗೂರು ಹೋಬಳಿಯ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ತಾಲೂಕಿನ ಹನುಮಂತಪುರ ಗ್ರಾಮದಲ್ಲಿ 6 ಕೋಟಿ 80 ಲಕ್ಷ ರು. ವೆಚ್ಚದಲ್ಲಿ ರೈತರ ಕೃಷಿ ಪಂಪ್ ಸೆಟ್‌ಗಳ ವಿದ್ಯುದೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಬರಪೀಡಿತ ಹೋಬಳಿ ಎಂದೆ ಹಣೆಪಟ್ಟಿ ಕಟ್ಟಿಕೊಂಡಿರುವ ಆತಗೂರು ಹೋಬಳಿಯನ್ನು ಕೆಲ ದಿನಗಳಲ್ಲೇ ಅಳಿಸಲಾಗುವುದು ಎಂದರು.
ಈ ಬಾರಿ ನಿರೀಕ್ಷೆಯಂತೆ ಮಳೆ ಬಂದಿದ್ದರೆ ಹೋಬಳಿಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಬೇಸಿಗೆಗೆ ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಮಳೆ ಅಭಾವದಿಂದ ಶಿಂಷಾ ನದಿಯೇ ಬತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಅಕ್ರಮ ಸಕ್ರಮ ಯೋಜನೆಯಡಿ ಹಣ ಪಾವತಿಸಿರುವ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಜೇಷ್ಠತೆ ಆಧಾರದ ಮೇಲೆ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗುತ್ತಿದೆ. ರೈತರ ಪಂಪ್ ಸೆಟ್‌ಗಳ ಮೂಲಕ ಬೆಳೆ ರಕ್ಷಿಸಿಕೊಳ್ಳಲೆಂದು ಪಂಪ್ ಸೆಟ್‌ಗಳಿಗೆ ವಿದ್ಯುದೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
6.80 ಕೋಟಿ ರು. ವೆಚ್ಚದಲ್ಲಿ 900 ಟ್ರಾನ್ಸ್ ಫಾರ್ಮರ್ ಅಳವಡಿಸಲಾಗುತ್ತಿದೆ. 500 ಪಂಪ್ ಸೆಟ್‌ಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಸುವ ಮೂಲಕ ರೈತರ ಬೆಳೆಗಳ ರಕ್ಷಣೆಗೆ ಮುಂದಾಗಲಾಗುವುದು ಎಂದರು.ಹೋಬಳಿಯಲ್ಲಿ ಶಾಶ್ವತವಾದ ನೀರಾವರಿ ಯೋಜನೆ ರೂಪಿಸದ ಕಾರಣ ಬೇಸಿಗೆಯಲ್ಲಿ ಈ ಭಾಗದ ರೈತರ ಕೊಳವೆ ಭಾವಿಗಳ, ಕೆರೆ ಕಟ್ಟೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ಮಳೆಯನ್ನು ನಂಬಿಕೊಂಡು ಬೇಸಾಯ ಮಾಡುತ್ತಿರುವ ರೈತರು ಮಳೆ ಬಾರದ ವೇಳೆಬೆಳೆದ ಬೆಳೆಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದರು.
ಈಗಾಗಲೇ ಸೋಮನಹಳ್ಳಿ ಬಳಿ 220 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಇನ್ನೊಂದು ವಾರದಲ್ಲಿ ಟೆಂಡರ್‌ಗೆ ಅನುಮೋದನೆ ಸಿಗಲಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಮನ್ಮುಲ್ ನಿರ್ದೇಶಕ ಕದಲೂರು ರಾಮಕೃಷ್ಣ, ಸೆಸ್ಕಾಂ ಇಇ ಶಿವಕುಮಾರ್, ಅಭಿಯಂತರರಾದ ರಮೇಶ್, ಮೋಹನ್, ಪ್ರದೀಪ್, ಮುಖಂಡರಾದ ಗೋವಿಂದ, ಅಶೋಕ್, ರಮೇಶ್, ಪೂರಸಭಾ ಮಾಜಿ ಸದಸ್ಯ ಡಾಬಾ ಮಹೇಶ್, ಮಹಾಲಿಂಗು ಮತ್ತಿತರರು ಇದ್ದರು.