ಕನ್ನಡಪ್ರಭ ವಾರ್ತೆ ಬಳ್ಳಾರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಗರದ ರೈಲ್ವೆ ನಿಲ್ದಾಣದಲ್ಲಿನ ನೂತನ “ಒಂದು ನಿಲ್ದಾಣ, ಒಂದು ಉತ್ಪನ್ನ” ಮಳಿಗೆಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು.ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮೇಯರ್ ಬಿ. ಶ್ವೇತಾ ಅವರು ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ದೃಷ್ಟಿಕೋನವನ್ನು ಹೊಂದಿದೆ. ಉತ್ಪನ್ನಗಳ ಮಾರಾಟ ಮಾಡಲು ಮಳಿಗೆ ಒದಗಿಸುವ ನಿಟ್ಟಿನಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ಮಳಿಗೆಯನ್ನು ಬಳ್ಳಾರಿ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಲಾಗಿದ್ದು, ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.ಹುಬ್ಬಳ್ಳಿ ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ರವಿ ಕುಮಾರ್ ಮಾತನಾಡಿ, ಸ್ಥಳೀಯ ಮಾರುಕಟ್ಟೆಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಯೋಜನೆ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಆಗಿದ್ದು, ಸ್ಥಳೀಯ ಕುಶಲ ಕರ್ಮಿಗಳಿಗೆ ಉಪಯುಕ್ತವಾಗಲಿದೆ ಎಂದರು.
ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ‘ಒಂದು ನಿಲ್ದಾಣ, ಒಂದು ಉತ್ಪನ್ನ’ಯೋಜನೆಯಡಿ ಸಂಡೂರು ಕರಕುಶಲ ಕೇಂದ್ರದ ಲಂಬಾಣಿ ಕಸೂತಿ ಕಲೆಯ ಉತ್ಪನ್ನಗಳ ಮಾರಾಟ ಮಳಿಗೆ ಆರಂಭಿಸಲಾಯಿತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಮೇಯರ್ ಬಿ. ಜಾನಕಿ, ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಆಂಜನೇಯಲು, ವಿಭಾಗೀಯ ವೈದ್ಯಕೀಯ ಅಧಿಕಾರಿ ಸುಶ್ಮಿತಾ ಜಗನ್ ಮೋಹನ್ ರೆಡ್ಡಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಮಹಾರುದ್ರ ಗೌಡ, ರಾಮಚಂದ್ರಯ್ಯ, ಬಳ್ಳಾರಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ನಾಗೇಶ್ ಬಾಬು ಶರ್ಮಾ, ಮುಖ್ಯ ವಾಣಿಜ್ಯ ನಿರೀಕ್ಷಕ ಎಸ್. ಹೊನ್ನೂರಸ್ವಾಮಿ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ರೈಲ್ವೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಇದೇ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈಲ್ವೇ ಇಲಾಖೆಯ ಸುಮಾರು ₹85 ಸಾವಿರ ಕೋಟಿ ಅಧಿಕ ಮೊತ್ತದ ವಿವಿಧ ರೈಲ್ವೆ ಯೋಜನೆಗಳ ಶಂಕುಸ್ಥಾಪನೆ, ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ 10 ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಯೋಜನೆಗಳಿಗೆ ಚಾಲನೆ ನೀಡಿದರು.