ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದರು ಅಷ್ಟೇ ಅಲ್ಲ ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಭಗವಂತ ಖೂಬಾ ಅವರ ಟಿಕೆಟ್ ಕಸಿಯುವ ಪ್ರಯತ್ನಗಳು ಕಳೆದ ಹಲವು ವರ್ಷಗಳಿಂದ ನಡೆದು ಬಂದಿದ್ದವಾದರೂ ಅಟಲ್ ಬಿಹಾರಿ ವಾಜಪೇಯಿ ಫೌಂಡೇಶನ್ ಹೆಸರಲ್ಲಿ ಬಿಜೆಪಿ ಹಿರಿಯ ಮುಖಂಡ ಗುರುನಾಥ ಕೊಳ್ಳೂರ ಅಧ್ಯಕ್ಷತೆಯಲ್ಲಿ ಸ್ಥಾಪಿತ ಟ್ರಸ್ಟ್ ಜೊತೆ ವಿವಿಧ ಮಠಾಧೀಶರು, ಪಕ್ಷದ ಹಿರಿಯರು, ಸಂಘ ಪರಿವಾರದ ಜೊತೆ ಗುರುತಿಸಿಕೊಂಡು ತಾವೆಲ್ಲರೂ ಟಿಕೆಟ್ ಆಕಾಂಕ್ಷಿಗಳು ಎಂದು ಘೋಷಿಸುವ ಮೂಲಕ ಬಿಜೆಪಿ ಟಿಕೆಟ್ ಹಾಲಿ ಸಂಸದರಿಗೆ ಸುಲಭದ ಮಾತಲ್ಲ ಎಂಬ ಸಂದೇಶ ರವಾನಿಸಿದಂತಿದೆ.ಇಲ್ಲಿನ ಜಿ.ಕೆ ಟವರ್‌ನಲ್ಲಿ ಸೋಮವಾರ ಅಟಲ್ ಬಿಹಾರಿ ವಾಜಪೇಯಿ ಫೌಂಡೇಶನ್‌ಗೆ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಚಾಲನೆ ನೀಡಿದರು. ಹುಲಸೂರು ಶಿವಾನಂದ ಸ್ವಾಮಿಗಳು, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಡಾ. ರಾಜಶೇಖರ ಸ್ವಾಮಿ ಗೋರ್ಟಾ, ಹಿರನಾಗಾಂವ್ ಶ್ರೀಗಳು ಸೇರಿದಂತೆ 20ಕ್ಕೂ ಹೆಚ್ಚು ಮಠಾಧೀಶರು, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹಿರಿಯ ಮುಖಂಡ ಸುಭಾಷ ಕಲ್ಲೂರ್, ಪಕ್ಷದ ಪ್ರಮುಖರಾದ ಬಾಬುರಾವ್ ಕಾರಬಾರಿ, ಈಶ್ವರಸಿಂಗ್ ಠಾಕೂರ್, ಸೋಮನಾಥ ಪಾಟೀಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ಅಲ್ಲದೆ ಖೂಬಾ ವಿರುದ್ಧ ಪರೋಕ್ಷವಾಗಿ ಗುಟುರು ಹಾಕಿದ್ದು, ಸಮೀಪಿಸುತ್ತಿರುವ ಲೋಕಸಭಾ ಚುನಾವಣೆಗೆ ಬಿಜೆಪಿಯ ಹಾಲಿ ಸಂಸದ ಖೂಬಾ ಗೆಲುವಿರಲಿ, ಟಿಕೆಟ್ ದಕ್ಕುವುದು ಸರಳ ಸಾಧ್ಯವೇನಲ್ಲ ಎಂಬುವದಿಲ್ಲಿ ಕಂಡುಬಂತು.ಹಮಾರಾ ಬಿಲ್ಲಿ ಹಮ್ಕೋ ಹೀ ಮ್ಯಾವ್ ಬೋಲ್ ರಹಾ ಹೈ
ಇನ್ನು ಅಟಲ್ ಬಿಹಾರಿ ವಾಜಪೇಯಿ ಫೌಂಡೇಶನ್ ಉದ್ಘಾಟನೆಯಲ್ಲಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಟ್ರಸ್ಟ್ ಉಪಾಧ್ಯಕ್ಷ ಸುಭಾಷ ಕಲ್ಲೂರ್, ಅಟಲ್ ಹೆಸರಲ್ಲಿ ಇರುವ ಶಕ್ತಿಯನ್ನು ಬಳಸಿ ನಾವೆಲ್ಲರೂ ಅಚಲ ಹಾಗೂ ಅಟಲವಾಗಿ ಇರುತ್ತೇವೆ. ಯಾವುದೇ ತಪ್ಪುಗಳನ್ನು ಮಾಡೋಲ್ಲ, ಆಗಲು ಬಿಡೋಲ್ಲ. ಕ್ಷೇತ್ರದಲ್ಲಿ ನಾವು ಬೆಳೆಸಿದ ಬೆಕ್ಕು ನಮಗೇ ದುರುಗುಟ್ಟುತ್ತಿದೆ (ಅಬ್ ಹಮಾರಾ ಬಿಲ್ಲಿ ಹಮ್ಕೋ ಹೀ ಮ್ಯಾವ್ ಬೋಲ್ ರಹಾ ಹೈ). ಅದನ್ನು ಸಾಕಿ ಬೆಳಿಸಿದ ನಾವು ಅದಕ್ಕೆ ಬುದ್ಧಿ ಕಲಿಸುವ ಸಮಯ ಬಂದಿದೆ. ನಾವು ಎಲ್ಲರೂ ಮುಂಬರುವ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಎಂಬುವುದರಲ್ಲಿ ಸಂದೇಹವೇ ಇಲ್ಲ ಎಂದು ಖೂಬಾ ವಿರುದ್ಧ ಪರೋಕ್ಷವಾಗಿ ಮುನಿಸು ವ್ಯಕ್ತಪಡಿಸಿದಂತಿತ್ತು.ಟ್ರಸ್ಟ್ ಅಧ್ಯಕ್ಷ ಗುರುನಾಥ ಕೊಳ್ಳುರ್ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಫೌಂಡೇಶನ್ ಉತ್ತಮ ಉದ್ದೇಶ ಇಟ್ಟುಕೊಂಡು ಆರಂಭ ಮಾಡಿದ್ದೇವೆ. ಈ ಫೌಂಡೇಶನ್ ಅಸ್ತಿತ್ವಕ್ಕೆ ಬಂದ ಮೇಲೆ ಲೋಕಸಭಾ ವ್ಯಾಪ್ತಿಯ 8 ತಾಲೂಕುಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಹೊನಲು ಬೆಳಕಿನ ಪಂದ್ಯಾವಳಿಯನ್ನೂ ಆಯೋಜಿಸಲಾಗಿದೆ ಎಂದರು.ಲೋಕಸಭಾ ಚುನಾವಣೆಗೆ ಟಿಕೆಟ್ ಬಯಸಿ ನಾನೂ ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲರಿಗೂ ಭೇಟಿ ಆಗಿದ್ದೇನೆ. ನಮ್ಮ ಫೌಂಡೇಶನ್ ನಲ್ಲಿರುವ ಯಾರಿಗಾದರೂ ಟಿಕೆಟ್ ಸಿಗಬಹುದು ಎಂದು ಗುರುನಾಥ ಕೊಳ್ಳೂರ ತಿಳಿಸಿದರು.
ಹಿರನಾಗಾವ್ ಜಯಮೃತ್ಯುಂಜಯ ಸ್ವಾಮೀಜಿ ಅವರು ಮಾತನಾಡಿ, ಉತ್ತರಪ್ರದೇಶದಂತೆ ಕರ್ನಾಟಕದಲ್ಲಿ ಒಬ್ಬ ಯೋಗಿ ಇರಲಿ ಎಂದು ಶಂಭುಲಿಂಗ ಶಿವಾಚಾರ್ಯರನ್ನು ಚುನಾವಣೆಗೆ ಸ್ಪರ್ಧಿಸಲು ನಾವೆಲ್ಲ ಸ್ವಾಮೀಜಿಗಳು ಗುರುತಿಸಿದ್ದೇವೆ ಹೊರತು, ಮತ್ತೇನೂ ಇಲ್ಲ. ಕಲ್ಲೂರ್, ಕೊಳ್ಳೂರ ಹಾಗೂ ವಾಲಿ ಇವರೆಲ್ಲರೂ ನಮ್ಮ ಕರಳು ಬಳ್ಳಿಗಳು ಯಾರೇ ಆಗಲಿ ದೇಶಕ್ಕೆ ಒಳ್ಳೆಯದಾಗಬೇಕೆಂಬ ಆಶಯ ನಮ್ಮದು ಎಂದರು.ಹುಲಸೂರು ಶಿವಾನಂದ ಸ್ವಾಮಿಗಳು ಮಾತನಾಡಿ, ಕೊಳ್ಳೂರ ಯಶಸ್ವಿ ಆಗುತ್ತಾರೆ. ಇಡೀ ಕರ್ನಾಟಕದ ಸ್ವಾಮೀಜಿಗಳ ಆಶೀರ್ವಾದ ಅವರ ಜೊತೆ ಇದೆ. ಕ್ರಿಕೆಟ್ ನಲ್ಲಿ ಸಿಕ್ಸರ್ ಬಾರಿಸಿದಂತೆ ರಾಜಕೀಯದಲ್ಲಿಯೂ ಸಿಕ್ಸರ್ ಬಾರಿಸಲಿ ಎಂದರು.
ಸೋಮನಾಥ ಪಾಟೀಲ್ ನಿರೂಪಿಸಿ ಎಂಜಿನಿಯರ್ ಹಾವಶೆಟ್ಟಿ ಪಾಟೀಲ್ ವಂದಿಸಿದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ, ಸದಸ್ಯರಾದ ಬಸವರಾಜ ಆರ್ಯ, ಬಾಬುರಾವ್ ಕಾರಬಾರಿ, ಪ್ರಭುರಾವ್ ವಸ್ಮತೆ, ಸಚಿನ ಕೊಳ್ಳೂರ, ಮಂಗಳಾ ಭಾಗವತ್, ಬಿಎಸ್. ಕುದರೆ ಸೇರಿದಂತೆ ಫೌಂಡೇಶನ್ ಪದಾಧಿಕಾರಿಗಳು ಸದಸ್ಯರು ಹಾಗೂ 20ಕ್ಕೂ ಹೆಚ್ಚು ಸ್ವಾಮೀಜಿಗಳು, ಬಿಜೆಪಿ ಪ್ರಮುಖರು ಇದ್ದರು.