ಕನ್ನಡಪ್ರಭ ವಾರ್ತೆ ಪುತ್ತೂರು
ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ‘ಜನ್ಮ ಶತಾಬ್ದಿ’ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ‘ಅಟಲ್ ವಿರಾಸತ್’ ಕಾರ್ಯಕ್ರಮ ನ.೧೯ರಂದು ಪುತ್ತೂರು ನಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬಿಜೆಪಿ ಪ್ರಮುಖರ, ಪದಾಧಿಕಾರಿಗಳ, ಜನಪ್ರತಿನಿಧಿಗಳ, ಕಾರ್ಯಕರ್ತರ ಪೂರ್ವಭಾವಿ ಸಭೆಯು ಶುಕ್ರವಾರ ಕಲ್ಲೇಗ ಭಾರತ್ ಮಾತಾ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ನ.೧೯ರಂದು ಬೆಳಗ್ಗೆ ೯.೩೦ಕ್ಕೆ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದಿಂದ ಕಾರ್ಯಕ್ರಮ ನಡೆಯುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯ ಮೈದಾನಕ್ಕೆ ಮೆರವಣಿಗೆ ನಡೆಯಲಿದೆ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪುತ್ತೂರಿಗೆ ಬಂದ ಸಂದರ್ಭದಲ್ಲಿ ಭಾಗವಹಿಸಿದ ಕಾರ್ಯಕ್ರಮ ನಡೆದ ಸ್ಥಳದಲ್ಲೇ ಜನ್ಮ ಶತಾಬ್ದಿಯ ಕಾರ್ಯಕ್ರಮವನ್ನೂ ಆಯೋಜಿಸಿರುವುದು ವಿಶೇಷ. ಬಿಜೆಪಿ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.ಜಿಲ್ಲಾಮಟ್ಟದ ಕಾರ್ಯಕ್ರಮವಾದರೂ ಪುತ್ತೂರನ್ನು ಆಯ್ಕೆ ಮಾಡಿರುವುದರಿಂದ ಪುತ್ತೂರಿನವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ವಾಜಪೇಯಿ ಅವರು ಹಿಂದೆ ಪುತ್ತೂರಿಗೆ ಬಂದಾಗ ಸೇರಿದಕ್ಕಿಂತ ಹೆಚ್ಚು ಸಂಖ್ಯೆಯ ಕಾರ್ಯಕರ್ತರು ಸೇರಬೇಕು. ಗ್ರಾಮ, ಬೂತ್‌ಗಳಿಂದ ಕಾರ್ಯಕರ್ತರು ಸೇರಬೇಕು. ವಾಹನಗಳ ವ್ಯವಸ್ಥೆ ಆಗಬೇಕು. ಪುತ್ತೂರು ಬಿಜೆಪಿಯಲ್ಲಿರುವ ಒಗ್ಗಟ್ಟು, ಕ್ರಿಯಾಶೀಲತೆ ಮಾದರಿಯಾಗಬೇಕು ಎಂದು ಹೇಳಿದರು.ಸಭೆಯಲ್ಲಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಹಾಗೂ ಅಟಲ್ ವಿರಾಸತ್ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಕಿಶೋರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರೇಮಾನಂದ ಶೆಟ್ಟಿ, ಸುನೀಲ್ ಆಳ್ವ, ಪ್ರಶಾಂತ್ ಮಾರ್ತ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಸ್ವಾಗತಿಸಿದರು. ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.