ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದಲ್ಲಿ ದಿವ್ಯ ಭವ್ಯವಾದ ಅಮೃತಲಿಂಗ ದೇವಸ್ಥಾನ ಜಿರ್ಣೋದ್ಧಾರ ಮತ್ತು ಸುಂದರವಾಗಿ ದೇವಾಲಯ ನಿರ್ಮಾಣವಾಗಿರೋದು ಸಂತಸ ತಂದಿದೆ. ಅಥಣಿಯಲ್ಲಿ ಒಂದೇ ಕಡೆ ಹೆಚ್ಚು ದೇವಾಲಯಗಳು ಇರುವುದು ಇನ್ನೊಂದು ವಿಶೇಷ ಧರ್ಮ ಮಾರ್ಗದಲ್ಲಿ ಅಥಣಿ ಸದ್ಭಕ್ತರು ನಡೆಯುತ್ತಿರುವುದು ನಾಡಿಗೆ ಹೆಮ್ಮೆ ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತರಾಧ್ಯ ಭಗವತ್ಪಾದರು ನುಡಿದರು.ಪಟ್ಟಣದ ಅಮೃತಲಿಂಗೇಶ್ವರ ದೇವಾಲಯದ ಶಿಖರದ ಕಳಸಾರೋಹಣ ಹಾಗೂ ಪರಿವಾರ ದೇವತೆಗಳ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಗುರುವಾರ ಹಮ್ಮಿಕೊಂಡ ಧರ್ಮಸಭೆಯ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಅಥಣಿ ಪುಣ್ಯಭೂಮಿ ತಪಸ್ವಿಗಳ ನಾಡು ಇಲ್ಲಿಯ ಭಕ್ತರ ಭಕ್ತಿ ಅಪಾರವಾಗಿದೆ. ಶ್ರೀಶೈಲಕ್ಕೂ ಅಥಣಿ ಅವಿನಾಭಾವ ಸಂಬಂಧವಿದೆ. ಅಮೃತಲಿಂಗ ದೇವಾಲಯವು ಅತ್ಯಂತ ಸುಂದರವಾಗಿ ನಿರ್ಮಾಣಗೊಂಡು ಸಮಾಜಕ್ಕೆ ಅರ್ಪಿತವಾಗಿದೆ. ಭಕ್ತರೂ ಕೂಡ ಶ್ರದ್ಧೆ, ಭಕ್ತಿಯಿಂದ ತಮ್ಮ ಸೇವೆಯನ್ನು ಸಮರ್ಪಿಸುತ್ತಿರುವುದು ಕಾರ್ಯಕ್ಕೆ ಸಾಕ್ಷಿಯಾಗಿದೆ. ಊರಿಗೊಂದು ಶಿವಾಲಯ ಹಣೆಗೆ ವಿಭೂತಿ ಇದು ಊರಿನ ಗೌರವ ಹೆಚ್ಚಿಸುತ್ತದೆ. ಇದೇ ರೀತಿ ಮನೆಯಲ್ಲಿರುವ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದು ನಾವು ಮಾಡುವ ದೇವರ ಸೇವೆ ಇನ್ನೊಬ್ಬರಿಗೆ ಒಳಿತಾಗುವ ರೀತಿಯಲ್ಲಿ ಮಾತನಾಡುವುದು ಕೂಡ ನಮ್ಮ ಸದ್ಭಾವ ಪರೋಪಕಾರ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಮರೆಯಬಾರದು ಎಂದು ತಿಳಿಸಿದರು. ಬೆಳ್ಳಂಕಿಯ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಮತ್ತು ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಅಥಣಿ ಎಂದರೇ ಶಿವನ ಶಿವಾಲಯ ಇದ್ದಂತೆ. ಇಲ್ಲಿ ಶಿವಯೋಗ ಮತ್ತು ಶಿವನ ನಿತ್ಯ ಆರಾಧನೆ ನಡೆಯುತ್ತಿದೆ. ದೇವಾಲಯವು ಐತಿಹಾಸಿಕ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವುದು ನಾಡಿಗೆ ವಿಶೇಷವಾಗಿದೆ ಎಂದರು. ಸಮಾಜಸೇವಕ ಆನಂದ ಟೊಣಪಿ ಮಾತನಾಡಿ, ದೇವಾಲಯ ಕಟ್ಟಡಕ್ಕೆ ಹಲವಾರು ದಾನಿಗಳು ತಮ್ಮ ದೇನಿಗೆಯನ್ನು ನೀಡುವ ಮೂಲಕ ಸುಂದರವಾಗಿ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಎಲ್ಲ ಭಕ್ತರ ಸಹಕಾರದಿಂದ ದೇವಾಲಯದ ಜೀವನ ದಾರ ಯಶಸ್ವಿಯಾಗಿದೆ. ಆಕರ್ಷಣೀಯವಾಗಿದೆ ಇದು ಐತಿಹಾಸಿಕ ಇತಿಹಾಸ ಕಾಲದ ದೇವಾಲಯವಾಗಿದೆ. ಇಲ್ಲಿಯ ಶಿವಲಿಂಗ ಅತ್ಯಂತ ಅದ್ಭುತವಾಗಿ ನಿರ್ಮಾಣಗೊಂಡಿದೆ ಎಂದರು.ಸಮಾರಂಭದಲ್ಲಿ ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ, ಉಪಾಧ್ಯಕ್ಷ ಅಮಿತ್ ಮಹಾಜನ, ಸುರೇಶ್ ಗೋಟಖಿಂಡಿ, ಕಾರ್ತಿಕ ಮಿರಜ್ಕರ, ಹಿರಿಯರಾದ ಪ್ರಕಾಶ ಮಹಾಜನ, ಸಿದ್ದು ಪಾಟೀಲ, ರಾಜು ಬುಲಬುಲೆ, ವಿಶ್ವನಾಥ ಕಮತಗಿ ಸೇರಿದಂತೆ ದೇವಸ್ಥಾನ ಸಮಿತಿ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಅಥಣಿಯ ಶಿವಯೋಗಿಗಳ ವೃತ್ತದಿಂದ ಆನೆಯ ಅಂಬಾರಿಯಲ್ಲಿ ದೇವಸ್ಥಾನದ ಕಳಸದ ಮೆರವಣಿಗೆ ವಿವಿಧ ವಾದ್ಯಮೇಳಗಳ ಮತ್ತು ಸಹಸ್ರಾರು ಸುಮಂಗಲಿಯರ ಕುಂಭಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ದೇವಸ್ಥಾನದ ಸಭಾಂಗಣದಲ್ಲಿ ಕಳಸ ರೋಣ ಹಾಗೂ ಧರ್ಮಸಭೆ ಜರುಗಿತು. ಈ ಸಮಾರಂಭದಲ್ಲಿ ವಿವಿಧ ಮಠಾಧೀಶರು, ದೇವಸ್ಥಾನ ಕಮಿಟಿಯ ಸದಸ್ಯರು, ಭಕ್ತರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅಮಿತ್ ಮಹಾಜನ ಸ್ವಾಗತಿಸಿದರು. ಡಾ.ಪ್ರಿಯಂವದಾ ಹುಲಗಬಾಳಿ ನಿರೂಪಿಸಿದರು. ಭಾಗ್ಯಶ್ರೀ ಕಮತಗಿ ವಂದಿಸಿದರು.