ಜಾತಿ ನಿಂದನೆ ಪ್ರಕರಣಗಳಲ್ಲಿ ನ್ಯಾಯ ವಿಳಂಬ । ದೇವಾಲಯ ಪ್ರವೇಶ ನಿರಾಕರಣೆ: ಎಸ್‌ಪಿ ಸಭೆಯಲ್ಲಿ ಮುಖಂಡರ ಕಿಡಿ
ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತವಾಗಿ ಎಫ್‌ಐಆರ್ ದಾಖಲಿಸಿ ನ್ಯಾಯ ಒದಗಿಸಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಅನಗತ್ಯವಾಗಿ ಬಿ ರಿಪೋರ್ಟ್ ಸಲ್ಲಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಹಾಗೂ ವಿವಿಧ ಇಲಾಖೆಗಳು ದಲಿತರ ಸಮಸ್ಯೆಗಳಿಗೆ ಮಾನವೀಯ ದೃಷ್ಟಿಕೋನದಿಂದ ಸ್ಪಂದಿಸಬೇಕು ಎಂಬ ಒತ್ತಾಯ ಜಿಲ್ಲಾ ಮಟ್ಟದ ದಲಿತರ ಕುಂದುಕೊರತೆ ಸಭೆಯಲ್ಲಿ ಬಲವಾಗಿ ವ್ಯಕ್ತವಾಯಿತು.
ನಗರದ ಪೋಲಿಸ್ ಸಮುದಾಯ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 300ಕ್ಕೂ ಹೆಚ್ಚು ದಲಿತ ಮುಖಂಡರು ಹಾಗೂ ಸಾರ್ವಜನಿಕರು ನಡೆದ ಚರ್ಚೆಯಲ್ಲಿ ತಮ್ಮ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಅಧಿಕಾರಿಗಳ ಮುಂದಿಟ್ಟರು.ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ, ಜಾತಿ ನಿಂದನೆ ಪ್ರಕರಣಗಳಲ್ಲಿ ವಿಳಂಬ, ದಲಿತರಿಗೆ ದೇವಾಲಯ ಪ್ರವೇಶ ನಿರಾಕರಣೆ, ಅಟ್ರಾಸಿಟಿ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆ, ದಲಿತರ ವಿರುದ್ಧ ಪ್ರತಿದೂರು ದಾಖಲಿಸುವ ಪ್ರವೃತ್ತಿ, ಭೂಮಿ ಅತಿಕ್ರಮಣ, ಸಿವಿಲ್ ವಿವಾದಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು, ದಲಿತ ಮುಖಂಡರ ವಿರುದ್ಧ ರೌಡಿಶೀಟರ್ ತೆರೆಯುವುದು, ಪೊಕ್ಸೊ ಪ್ರಕರಣಗಳಲ್ಲಿ ದಲಿತ ಮಕ್ಕಳೇ ಹೆಚ್ಚಾಗಿ ಸಿಲುಕುತ್ತಿರುವುದು ಸೇರಿದಂತೆ ಹಲವು ವಿಚಾರಗಳು ಪ್ರಸ್ತಾಪವಾದವು.
ಜಿಲ್ಲೆಯಲ್ಲಿ ದಲಿತ ಮುಖಂಡರ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ ಎಂದು ಕೆಲ ಮುಖಂಡರು ಆರೋಪಿಸಿದರು. ಗಡಿ ಭಾಗಗಳಲ್ಲಿ ದಲಿತರ ಮೇಲಿನ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಇಂತಹ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಶಾಲಾ-ಕಾಲೇಜುಗಳ ಸಮೀಪ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಬೇಕು ಹಾಗೂ ದೇವಾಲಯ ಪ್ರವೇಶ ನಿರಾಕರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬ ಬೇಡಿಕೆಯೂ ಕೇಳಿ ಬಂತು.
ಸಿಕೆಬಿ-4 ನಗರದ ಪೋಲಿಸ್ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮಾತನಾಡಿದರು.