ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದರೆ ಸಹಿಸಲು ಸಾಧ್ಯವಿಲ್ಲ: ಡಾ.ಪ್ರಭಾಕರ್ ಭಟ್ ಕಲ್ಲಡ್ಕ

KannadaprabhaNewsNetwork | Published : Apr 1, 2025 12:50 AM

ಸಾರಾಂಶ

ಹಿಂದುತ್ವ ಎಂದು ಏನು ಬೇಕಾದರೂ ಮಾತನಾಡಬಹುದೇ, ಸಂಘಟನೆಯೊಳಗೆ ಇದ್ದಾಗ ಅದರ ಗಡಿ ಎಂಬುದಿರುತ್ತದೆ. ಯಾರೇ ಆದರೂ ಗಡಿ ಬಿಟ್ಟು ಆಚೆ ಹೋಗಬಾರದು. ಪಕ್ಷದ ಸಮಿತಿಯೊಳಗೆ ಎಷ್ಟು ಬೇಕಾದರೂ ಮಾತನಾಡಬಹುದು ಎಂದು ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಹಿಂದೂ ರಾಷ್ಟ್ರದೊಳಗೆ ಪ್ರತಿಯೊಬ್ಬರಿಗೂ ಬದುಕುವ ಅವಕಾಶವಿದೆ. ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ ಎಲ್ಲೆ ಮೀರಿ ಹೋಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್‍ಯಕಾರಿಣಿ ಆಹ್ವಾನಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಎಚ್ಚರಿಕೆ ನೀಡಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾರು ಯಾವ ದೇವರನ್ನು ಬೇಕಾದರೂ ಪೂಜೆ ಮಾಡಬಹುದು. ಆದರೆ, ನಮ್ಮ ದೇವರನ್ನು ಪೂಜೆ ಮಾಡುವುದಕ್ಕೆ ಅಡ್ಡಿಪಡಿಸುವುದು, ಶ್ರದ್ಧಾ ಕೇಂದ್ರಗಳನ್ನು ಒಡೆದು ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಇಲ್ಲಿ ಬದುಕುವ ಹಕ್ಕಿದೆ. ಹಾಗಂತ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ ನಮ್ಮ ಹೆಣ್ಣು ಮಕ್ಕಳನ್ನು ಅಪಹರಿಸುವುದು, ಹಿಂದೂಗಳ ಮೇಲೆ ದೌರ್ಜನ್ಯ ನಡೆಸುವುದು, ದೇವರು, ಉತ್ಸವಗಳಿಗೆ ಅಡ್ಡಿಪಡಿಸುವುದನ್ನು ಸಹಿಸುವುದಿಲ್ಲ. ನಾವು ಏನಾದರೂ ಹಾಗೆ ಮಾಡಿದ್ದೀವಾ? ಅವರ ಹೆಣ್ಣು ಮಕ್ಕಳನ್ನು ಎಳೆದೊಯ್ದಿದ್ದೀವಾ? ಅವರ ಮಸೀದಿ, ಚರ್ಚುಗಳಿಗೆ ಹಾನಿ ಮಾಡಿದ್ದೀವಾ? ಎಲ್ಲರೂ ಶಾಂತಿ-ಸಹಬಾಳ್ವೆಯಿಂದ ಬದುಕುವುದಕ್ಕೆ ಯಾವ ಆತಂಕವೂ ಇಲ್ಲ ಎಂದರು.ವಕ್ಫ್ ಬಂದಾಗಿನಿಂದ ನಮ್ಮ ಭೂಮಿ ಕಳೆದುಕೊಳ್ಳುತ್ತಿದ್ದೇವೆ. ಮುಂದೊಂದು ಒಂದು ದಿನ ಭಾರತ ಪಾಕಿಸ್ತಾನವಾಗುತ್ತದೆ. ಈಗ ನಾವು ಎಚ್ಚರಿಕೆ ಕೊಡಲಿಲ್ಲ ಎಂದರೆ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತದೆ. ಈಗಲಾದರೂ ಎಚ್ಚೆತ್ತುಕೊಳ್ಳುವ ಅನಿವಾರ್‍ಯತೆ ಇದೆ. ಕೆಲವರು ರಾಜಕಾರಣಕ್ಕೆ ವಿರೋಧ ಮಾಡುತ್ತಾರೆ ಅಷ್ಟೆ ಎಂದು ಹೇಳಿದರು.

ನಮ್ಮ ಭೂಮಿಯನ್ನು ಅಲ್ಲಾನಿಗೆ ಕೊಟ್ಟಾಗಿದೆ. ಮತ್ತೊಂದು ಪಾಕಿಸ್ತಾನ, ಮತ್ತೊಂದು ಬಾಂಗ್ಲಾದೇಶ ಮಾಡುವುದು ಸರಿಯಲ್ಲ. ಅವರೆಲ್ಲ ಆಕ್ರಮಣಕಾರಿಯಾಗಿ ಬಂದರು. ಇಲ್ಲಿರುವುದಕ್ಕೆ ಆಕ್ಷೇಪಣೆ ಇಲ್ಲ. ಯಾರು ಮಸೀದಿ, ಚರ್ಚು ಕಟ್ಟಲು ನಾವೇ ಅವರಿಗೆ ಸಹಾಯ ಮಾಡಿದ್ದೇವೆ. ಆದರೂ ನಮ್ಮ ಮೇಲೆ ಸವಾರಿ ಮಾಡುವುದು, ಮತಾಂತರ ಮಾಡುವುದು ಸರಿಯಲ್ಲ ಎಂದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶ ವಿಭಜನೆಯನ್ನು ವಿರೋಧಿಸಿದ್ದರು. ಆದರೂ ಬಹುಮತದ ಆಧಾರದ ಮೇಲೆ ವಿಭಜನೆಗೆ ಸಹಮತ ವ್ಯಕ್ತವಾಯಿತು. ಆದರೆ, ಅಂದು ಅವರು ಪಾಕಿಸ್ತಾನದಲ್ಲಿರುವ ಹಿಂದೂಗಳೆಲ್ಲ ನಮ್ಮ ರಾಷ್ಟ್ರಕ್ಕೆ ಬರಲಿ, ಭಾರತದಲ್ಲಿರುವ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದರು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಂದು ಅದು ಸಾಧುವಾಗಿದ್ದರೆ ಇವತ್ತು ನಮ್ಮ ಮೇಲೆ ಮುಸ್ಲಿಮರು ದೌರ್ಜನ್ಯ ನಡೆಸಲು ಆಗುತ್ತಿರಲಿಲ್ಲ. ಪಾಕಿಸ್ತಾನ, ಬಾಂಗ್ಲಾ ಆದಂತೆ ಮತ್ತೆ ದೇಶ ಒಡೆಯುವ ಹುನ್ನಾರ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಕೇವಲ ಮತಗಳಿಗಾಗಿ ಅವರನ್ನು ಓಲೈಕೆ ಮಾಡುತ್ತಾರೆ ಎಂದು ಎಚ್ಚರಿಸಿದರು.

ನಾಗಮಂಗಲದಲ್ಲಿ ಗಣೇಶನ ಮೆರವಣಿಗೆ ವೇಳೆ ಗಲಾಟೆ ಮಾಡುತ್ತಾರೆ. ಅನೇಕ ಕಡೆಗಳಲ್ಲಿ ದೇವರ ಮೆರವಣಿಗೆಯಲ್ಲಿ ಗದ್ದಲ ನಡೆಸುತ್ತಾರೆ. ಮಂಗಳೂರಿನಲ್ಲಿ ಹಸುಗಳನ್ನು ಧಾರುಣವಾಗಿ ಕಸಾಯಿ ಖಾನೆಗೆ ಸಾಗಿಸುತ್ತಾರೆ. ಇದನ್ನು ತಡೆಯಲು ಹೋದರೆ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇಂತಹ ಕ್ರಮ ಸರಿಯಲ್ಲ. ಇದಕ್ಕೆ ರಾಜಕೀಯ ಬೆರಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದುತ್ವ ಎಂದರೆ ನಾಮ ಹಾಕಿಕೊಳ್ಳುವುದೇ ?:

ಹಿಂದುತ್ವ ಎಂದು ಏನು ಬೇಕಾದರೂ ಮಾತನಾಡಬಹುದೇ, ಸಂಘಟನೆಯೊಳಗೆ ಇದ್ದಾಗ ಅದರ ಗಡಿ ಎಂಬುದಿರುತ್ತದೆ. ಯಾರೇ ಆದರೂ ಗಡಿ ಬಿಟ್ಟು ಆಚೆ ಹೋಗಬಾರದು. ಪಕ್ಷದ ಸಮಿತಿಯೊಳಗೆ ಎಷ್ಟು ಬೇಕಾದರೂ ಮಾತನಾಡಬಹುದು ಎಂದು ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಪಕ್ಷದ ವಿಚಾರವನ್ನು ಪಕ್ಷದೊಳಗೇ ಚರ್ಚೆ ಮಾಡಬೇಕು. ಅದು ಬಿಟ್ಟು ಹೊರೆ ಮಾತನಾಡುವುದು ಸರಿಯಲ್ಲ. ಅದು ಹಿಂದುತ್ವದ ಲಕ್ಷಣವಲ್ಲ. ನಾಮ ಹಾಕಿದರೆ ಮಾತ್ರ ಹಿಂದುತ್ವವೇ, ಹಿಂದುತ್ವದಲ್ಲಿ ಒಂದು ಶಿಸ್ತಿದೆ. ಪಕ್ಷದಲ್ಲಿರುವ ಅಲಿಶಾಸನದ ಗಡಿಯಲ್ಲಿರಬೇಕು. ಅದು ಬಿಟ್ಟು ಬೇರೆ ಮಾತನಾಡುವುದು ಪಕ್ಷಕ್ಕೆ ಮುಜುಗರ ಉಂಟುಮಾಡುವುದಿಲ್ಲವೇ ಎಂದು ಪ್ರಶ್ನಿಸಿದರು.

Share this article