ಧಾರವಾಡ:
ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಸಮಾಜ ಬಾಂಧವರು ಮಾಜಿ ಸಚಿವ ಆಲ್ಕೋಡ ಹನುಮಂತ ನೇತೃತ್ವದಲ್ಲಿ ಗುರುವಾರ ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿ, ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿದ್ದರಿಂದ ಕಚೇರಿಯ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ನಿಂಗಪ್ಪ ಮಾದರಗೆ ವಿದ್ಯುತ್ ಆಘಾತ ನೀಡಿ ಕೊಲೆ ಮಾಡಿದ್ದರೂ, ಸ್ಥಳೀಯ ಪೊಲೀಸರು ಪ್ರಕರಣವನ್ನು ಸಹಜ ಸಾವು ಎಂದು ಬಿಂಬಿಸಿ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ದಲಿತ ಸಮಾಜದ ಮುಖಂಡರು ಗಂಭೀರ ಆರೋಪ ಮಾಡಿದರು. ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವ ಜತೆಗೆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.ಗ್ರಾಮದಲ್ಲಿ ಮಾದಿಗ ಸಮುದಾಯದ ಏಳು ಕುಟುಂಬಗಳು ಸಾಗುವಳಿ ಮಾಡುವ ಸರ್ಕಾರಿ ಜಮೀನಿನ ವಿಷಯದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ದಬ್ಬಾಳಿಕೆ ನಡೆಸುವ ಜತೆಗೆ ಸುಳ್ಳು ದೂರು ಕೂಡ ದಾಖಲಿಸಿದ್ದಾಗಿಯೂ ಪ್ರತಿಭಟನಕಾರರು ಆರೋಪಿಸಿದರು. ಅಲ್ಲದೇ ನರೇಂದ್ರ, ತಿಮ್ಮಾಪುರ, ಮರೇವಾಡ, ಅಣ್ಣಿಗೇರಿಯ ತುಪ್ಪದಕುರಹಟ್ಟಿ ಹಾಗೂ ದುರ್ಗದಕೇರಿ ಗ್ರಾಮಗಳಲ್ಲೂ ಸಮುದಾಯದ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಜಿಲ್ಲಾಡಳಿತ ಶೀಘ್ರದಲ್ಲೇ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಪಟ್ಟುಹಿಡಿದರು.