ಕನ್ನಡಪ್ರಭ ವಾರ್ತೆ ಮಂಡ್ಯ
ಸಮಗ್ರ ಕನ್ನಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಮತ್ತು ಇತರರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಈಡುಗಾಯಿ ಒಡೆದು, ಕಡ್ಲೇಪುರಿ ಹಂಚಿ ವಿಶೇಷವಾಗಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು.
ಮೈಸೂರು, ಕಾರವಾರ, ಮಂಗಳೂರು ಬಂದರು ಅಭಿವೃದ್ಧಿ ಆಗಬೇಕು. ಬೆಳಗಾವಿಯನ್ನು ಉಳಿಸಬೇಕು. ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಕನ್ನಡಿಗರಿಗೆ ಉದ್ಯೋಗಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಇದುವರೆಗೆ ಪ್ರಾಮಾಣಿಕ ಚಿಂತನೆ ನಡೆದಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಯಾಗಬೇಕು. ಕೇರಳದಲ್ಲಿ ಕನ್ನಡಿಗರನ್ನು ಗುಲಾಮರ ರೀತಿ ಕಾಣುತ್ತಿದ್ದಾರೆ. ರಾಜ್ಯದಲ್ಲಿ ಕೇರಳಿಗರಿಗೆ ತೊಂದರೆಯಾದರೆ ಅವರು ಗಂಭೀರವಾಗಿ ಮಾತನಾಡುತ್ತಾರೆ ಇದು ಸರಿಯಲ್ಲ ಎಂದು ದೂರಿದರು.ಮುಂದಿನ ದಿನಗಳಲ್ಲಿ ಮಲಯಾಳಿಗಳಿಂದ ಕನ್ನಡಿಗರ ಮೇಲೆ ದೌರ್ಜನ್ಯವಾದಲ್ಲಿ ಮಲಯಾಳಿಗಳೇ ಕರ್ನಾಟಕ ಬಿಟ್ಟು ತೊಲಗಿ ಎಂಬ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿಯವರು ಮುಸ್ಲಿಮರನ್ನು ವಿರೋಧಿಸುತ್ತಾರೆ. ಇದು ಸರಿಯಲ್ಲ. ಬಿಜೆಪಿಯವರಿಗೆ ಮುಸಲ್ಮಾನರ ಬಗ್ಗೆ ಕೋಪ ಇದೆ. ಹಿಂದಿಯವರು ಇಲ್ಲೇ ಕುಳಿತಿದ್ದಾರೆ. ಅದರ ಬಗ್ಗೆ ನಿಮ್ಮ ಮಾತಿಲ್ಲ. ಮಹದಾಯಿ, ಕಳಸಾ ಬಂಡೂರಿ ಆಗಲೇಬೇಕು. ಇದಕ್ಕಾಗಿ ಜ. ೧೮ರಂದು ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಸಮಯದಲ್ಲಿ ಒಂಟೆಗಳ ಮೆರವಣಿಗೆ ಮಾಡಲು ಮುಂದಾಗಿದೆ. ನಾವು ೬೦ ವರ್ಷಗಳ ಹಿಂದೆಯೇ ಎಮ್ಮೆಗಳ ಮೆರವಣಿಗೆ ಮಾಡಿದ್ದೇವೆ. ಈಗ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮುಖಂಡರಾದ ಮಹಂತಪ್ಪ, ಬೆಟ್ಟಹಳ್ಳಿ ಮಂಜುನಾಥ್, ಕರವೇ ಎಚ್.ಡಿ. ಜಯರಾಂ, ನಾರಾಯಣ, ಪಾರ್ಥಸಾರಥಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.