ದಾವಣಗೆರೆ: ಭತ್ತ ಬೆಳೆಯಲು ಸಿದ್ಧವಾಗುತ್ತಿರುವ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ಜ.2ರಿಂದಲೇ ಭದ್ರಾ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟದಿಂದ ಜಿಲ್ಲಾ ಆಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಬಿ.ಎಂ.ಸತೀಶ, ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1.60 ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಭತ್ತ ಬೆಳೆಯಲು ಸಜ್ಜಾಗಿದ್ದಾರೆ. ಈಗಾಗಲೇ ಸಸಿ ಮಡಿ ಸಿದ್ಧಪಡಿಸಿಕೊಂಡು, ಬೀಜ ಚೆಲ್ಲಲು ಭದ್ರಾ ನಾಲೆಯ ನೀರು ಬೇಕೇಬೇಕಾಗಿದೆ. ವಾರ್ಷಿಕ ಬೆಳೆಗಳಾದ ಕಬ್ಬು, ದಾಳಿಂಬೆ ಸೇರಿದಂತೆ ಅಡಕೆ, ತೆಂಗು, ತೋಟಗಳಿಗೂ ನೀರುಮಿಸಬೇಕು. ರೈತರಂತೂ ಈಗ ಭದ್ರಾ ನಾಲೆ ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದರು.
ಸದ್ಯ ಭದ್ರಾ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 181 ಅಡಿಗಳಷ್ಟು ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿಯಾಗಿದೆ. ಆದರೂ, ಇಂದಿಗೂ ಕಾಲುವೆಗೆ ನೀರು ಹರಿಸುವ ಕೆಲಸವಾಗುತ್ತಿಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲವೆಂಬಂತೆ ಪ್ರಕೃತಿ ಉತ್ತಮ ಮಳೆ ನೀಡಿ, ಭದ್ರಾ ಡ್ಯಾಂನ್ನು ಭರ್ತಿ ಮಾಡಿದ್ದರೂ ಸರ್ಕಾರ, ನೀರಾವರಿ ಇಲಾಖೆ, ಭದ್ರಾ ಕಾಡಾ ಸಮಿತಿ ನಾಲೆಗೆ ನೀರು ಹರಿಸಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಜ.2ರಂದು ನಡೆಯಲಿದೆ. ಭದ್ರಾ ಕಾಡಾ ಸಮಿತಿ ಸಭೆಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿಗಳು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡು, ದಾವಣಗೆರೆ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿದರು.
ಭದ್ರಾ ಕಾಡಾ ಸಮಿತಿ ಸಭೆ ಜ.2ರಂದು ನಡೆಯಲಿದ್ದು, ದಾವಣಗೆರೆ ಜಿಲ್ಲೆಯ ಕೃಷಿ ಮತ್ತು ತೋಚಗಾರಿಕೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ದಾವಣಗೆರೆ ಜಿಲ್ಲೆಯ ಬೆಳೆಯ ಪ್ರಮಾಣ, ನೀರಿನ ಅವಶ್ಯಕತೆ ಪ್ರಮಾಣ ಮತ್ತು ನೀರು ಹರಿಸುವ ಅವಧಿ ಸೇರಿದಂತೆ ಸಮಗ್ರ ಮಾಹಿತಿಯನ್ನು ನಿಖರ ಮತ್ತು ಸೂಕ್ತ ಅಂಕಿ ಅಂಶಗಳ ಸಮೇತವಾಗಿ ಐಸಿಸಿ ಸಭೆಯಲ್ಲಿ ವಿವರಿಸುವ ಮೂಲಕ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುವಂತೆ ಒತ್ತಡ ಹೇರುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.ಭದ್ರಾ ಕಾಲುವೆಗಳಿಗೆ ಜ.2ರಿಂದಲೇ ನೀರು ಹರಿಸುವಂತೆ ಐಸಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಶೇ.70ರಷ್ಟು ಇರುವುದರಿಂದ ಮುಂದಿನ ಐಸಿಸಿ ಸಭೆಯನ್ನು ದಾವಣಗೆರೆ ಜಿಲ್ಲೆಯಲ್ಲೇ ನಡೆಸಲು ನಿರ್ಣಯಿಸಬೇಕು. ಭದ್ರಾ ಕಾಲುವೆಗಳು ಶಿಥಿಲಗೊಂಡಿದ್ದು, ಗಿಡ ಗಂಟೆಗಳು ಬೆಳೆದು, ನೀರು ಸರಾಗವಾಗಿ ಹರಿಯದೇ ಇರುವುದು, ಅಲ್ಲಲ್ಲಿ ವ್ಯರ್ಥವಾಗಿ ಸೋರಿಕೆಯಾಗುತ್ತಿರುವುದು ಸಾಮಾನ್ಯವಾಗಿದೆ. ಕಾಲುವೆಗಳ ದುರಸ್ತಿಗೆ, ಹೂಳೆತ್ತಲು, ಗಿಡ ಗಂಟೆ ತೆರವಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಐಸಿಸಿ ಸಭೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳು ವಿಚಾರ ಮಂಡಿಸಬೇಕು ಎಂದು ಮನವಿ ಮಾಡಿದರು.
ಒಕ್ಕೂಟದ ಮುಖಂಡರಾದ ಶ್ಯಾಗಲೆ ದೇವೇಂದ್ರಪ್ಪ, ಕುಕ್ಕವಾಡ ರುದ್ರೇಗೌಡ್ರು, ಆರನೇ ಕಲ್ಲು ವಿಜಯಕುಮಾರ, ಹೊಸ ನಾಯಕನಹಳ್ಳಿ ಶಿವಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್.ಜಿ.ಗಣೇಶಪ್ಪ, ಮಾಜಿ ಮೇಯರ್ ಎಚ್.ಎನ್.ಗುರುನಾಥ, ಜಿಮ್ಮಿ ಹನುಮಂತಪ್ಪ, ಕುರ್ಕಿ ರೇವಣಸಿದ್ದಪ್ಪ, ವಡ್ಡಿನಹಳ್ಳಿ ಶಿವಶಂಕರ, ಕಲ್ಪನಹಳ್ಳಿ ರೇವಣಸಿದ್ದಪ್ಪ, ಸತೀಶ, ಕೊಳೇನಹಳ್ಳಿ ಶರಣಪ್ಪ, ಕನಗೊಂಡನಹಳ್ಳಿ ಮಲ್ಲಿಕಾರ್ಜುನ, ತುಂಬಿಗೆರೆ ದಿನೇಶ ಗೌಡ ಮತ್ತಿತರರಿದ್ದರು.