ಸಂಬಂಧಿಕರು, ಪರಿಚಯಸ್ಥರಿಂದಲೇ ಮಕ್ಕಳ ಮೇಲೆ ದೌರ್ಜನ್ಯ

KannadaprabhaNewsNetwork |  
Published : Jul 26, 2024, 01:36 AM IST
25ಡಿಡಬ್ಲೂಡಿ6ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಭಾಗಿದಾರರೊಂದಿಗೆ ಸಮಾಲೋಚನೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹಾಗೂ ನ್ಯಾಯಾಧೀಶ ಪಿ.ಎಫ್‌. ದೊಡ್ಡಮನಿ ನೆರವೇರಿಸಿದರು.  | Kannada Prabha

ಸಾರಾಂಶ

ಮಕ್ಕಳ ರಕ್ಷಣೆಯಲ್ಲಿ ತಂದೆ-ತಾಯಿ, ಪಾಲಕರ ಪಾತ್ರ ಮಹತ್ವದ್ದಾಗಿದೆ. ಅವರಿಂದ ಬದ್ಧತಾ ಪ್ರಮಾಣ ಪತ್ರ ಪಡೆಯುವ ಮೂಲಕ ಅವರನ್ನು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜವಾಬ್ದಾರರನ್ನಾಗಿ ಮಾಡಬೇಕು.

ಧಾರವಾಡ:

ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಪರಿಚಯಸ್ಥರಿಂದಲೇ ಮಕ್ಕಳ ಮೇಲೆ ದೌರ್ಜನ್ಯವಾಗಿರುವುದು ಕಂಡು ಬಂದಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಆತಂಕ ವ್ಯಕ್ತಪಡಿಸಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಭಾಗಿದಾರರೊಂದಿಗೆ ಸಮಾಲೋಚನೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯಲ್ಲಿ ಅವರು ಮಾತನಾಡಿ, ಸರ್ಕಾರ, ಸರ್ಕಾರೇತರ ಸಂಸ್ಥೆ, ಮಕ್ಕಳ ರಕ್ಷಣಾ ಆಯೋಗ, ಪೊಲೀಸ್ ಸೇರಿ ಎಲ್ಲ ಇಲಾಖೆಗಳು ಕಾನೂನಾತ್ಮಕವಾಗಿ ಮಕ್ಕಳ ರಕ್ಷಣೆ ಹಾಗೂ ಅವರಿಗೆ ಉತ್ತಮ ವಾತಾವರಣ ಕಲ್ಪಿಸಲು ಶ್ರಮಿಸಿದರೂ ಮಕ್ಕಳ ರಕ್ಷಣೆಯು ಯಶ ಕಾಣುತ್ತಿಲ್ಲ. ತಮ್ಮ ಕುಟುಂಬದ ಸುತ್ತಲೇ ಇರುವ ದೌರ್ಜನ್ಯವೇ ಇದಕ್ಕೆ ಕಾರಣವಾಗಿದ್ದು, ಹೆಚ್ಚುತ್ತಿರುವ ಮಕ್ಕಳ ಪ್ರಕರಣಗಳು ಇದಕ್ಕೆ ಸಾಕ್ಷಿ ಎಂದರು.

ಮಕ್ಕಳ ರಕ್ಷಣೆಯಲ್ಲಿ ತಂದೆ-ತಾಯಿ, ಪಾಲಕರ ಪಾತ್ರ ಮಹತ್ವದ್ದಾಗಿದೆ. ಅವರಿಂದ ಬದ್ಧತಾ ಪ್ರಮಾಣ ಪತ್ರ ಪಡೆಯುವ ಮೂಲಕ ಅವರನ್ನು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜವಾಬ್ದಾರರನ್ನಾಗಿ ಮಾಡಬೇಕೆಂದು ಸೂಚಿಸಿದರು.

ಜು. 23ರಂದು ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಸರ್ಕಾರಿ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ತೋರಿ, ಬೆದರಿಕೆ ಹಾಕಿದ ಶಿಕ್ಷಕನ ವಿರುದ್ಧ ಕಲಘಟಗಿ ಬಿಇಒ ಮುಂದಿನ 24 ಗಂಟೆಯಲ್ಲಿ ಎಫ್‌ಐಆರ್‌ ದಾಖಲಿಸಬೇಕೆಂದು ಶೇಖರಗೌಡ ರಾಮತ್ನಾಳ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ತನ್ನದೇ ಶಾಲೆಯಲ್ಲಿ 10ನೇ ವರ್ಗದ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ತೋರಿ, ಆ ಮಗುವಿಗೆ ಬೆದರಿಕೆ ಹಾಕಿದ್ದು ಅಕ್ಷಮ್ಯ ಅಪರಾಧ. ಶಿಕ್ಷಕನಿಗೆ ಅಮಾನತು ಶಿಕ್ಷೆ ಸಾಲದು; ಅವನ ವಿರುದ್ಧ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ವರದಿ ನೀಡಬೇಕು. ಇಲ್ಲದಿದ್ದಲ್ಲಿ ದೌರ್ಜನ್ಯ ವೆಸಗಿದ ಶಿಕ್ಷಕ, ಅಲ್ಲಿನ ಬಿಇಒ ಮೇಲೆ ಮಕ್ಕಳ ರಕ್ಷಣಾ ಆಯೋಗವೇ ಎಫ್‌ಐಆರ್‌ ದಾಖಲಿಸುತ್ತದೆ ಎಂದು ಎಚ್ಚರಿಸಿದರು.

ಶಾಲಾ ಮಕ್ಕಳಿಗೆ ತೊಂದರೆ ಉಂಟಾದಾಗ ಅಥವಾ ಇತರ ಮಕ್ಕಳ ಹಕ್ಕುಗಳಿಗೆ ದಕ್ಕೆ ಬಂದಾಗ ತಕ್ಷಣ ಸಹಾಯಕ್ಕೆ ಬರುವುದು ಮಕ್ಕಳ ಸಹಾಯವಾಣಿ 1098. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಈ ಕುರಿತು ಮಕ್ಕಳಿಗೆ ಸರಿಯಾದ ತಿಳಿವಳಿಕೆ, ಪ್ರಚಾರ ನೀಡುತ್ತಿಲ್ಲ. ಪ್ರತಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ನಮೂದಿಸಿರುವ ಶಾಶ್ವತ ಫಲಕ ಅಳವಡಿಸಬೇಕೆಂದು ಸೂಚಿಸಿದರು.

ಅನಧಿಕೃತ ತರಬೇತಿ ಕೇಂದ್ರಕ್ಕೆ ಬೀಗ ಹಾಕಿ:

ಜಿಲ್ಲೆಯಲ್ಲಿ ಹಲವಾರು ಅನಧಿಕೃತ ಶಾಲೆ ಹಾಗೂ ಅನಧಿಕೃತ ಶಾಲಾ ತರಬೇತಿ ಕೇಂದ್ರಗಳು ನಡೆಯುತ್ತಿವೆ. ಬಿಇಒ ಸೇರಿದಂತೆ ಯಾವ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ನವಲಗುಂದದಲ್ಲಿ ಪರಿಶೀಲನೆ ಸಮಯದಲ್ಲಿ ವಿದ್ಯಾಜ್ಯೋತಿ ಎಂಬ ಅನಧಿಕೃತ ಶಾಲೆಗೆ ಭೇಟಿ ನೀಡಿದಾಗ 65ಕ್ಕೂ ಹೆಚ್ಚು ಮಕ್ಕಳು ಬೇರೆ ಜಿಲ್ಲೆ ಹಾಗೂ ಇದೇ ಜಿಲ್ಲೆಯ ಅಧಿಕೃತ ಶಾಲೆಯ ಮಕ್ಕಳು ಕಂಡು ಬಂದರು. ವಿದ್ಯಾಜ್ಯೋತಿ ಶಾಲೆಯೇ ಅನಧಿಕೃತ, ಅಲ್ಲಿ ಅರ್ಹತೆ ಇರುವ ಶಿಕ್ಷಕರಿಲ್ಲ, ಶೌಚಾಲಯ ಇಲ್ಲ, ಶುಚಿತ್ವವಿರುವ ಕೊಠಡಿಗಳಿಲ್ಲ. ಆದರೂ ಮಕ್ಕಳಿದ್ದಾರೆ. ಇದಕ್ಕೆ ಅಲ್ಲಿನ ಸಿಆರ್‌ಪಿ, ಬಿಆರ್‌ಪಿ, ಬಿಇಒ ಅವರನ್ನು ಜವಾಬ್ದಾರರನ್ನಾಗಿ ಕ್ರಮ ಜರುಗಿಸಬೇಕು ಮತ್ತು ಮುಂದಿನ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಅನಧಿಕೃತ ಶಾಲೆ, ಕೋಚಿಂಗ್ ಸೆಂಟರ್‌ಗಳಿಗೆ ಬೀಗ ಹಾಕಬೇಕು. ಈ ಕುರಿತ ವರದಿಯನ್ನು ಒಂದು ತಿಂಗಳೊಳಗಾಗಿ ಸಲ್ಲಿಸಬೇಕೆಂದು ಡಿಡಿಪಿಐಗೆ ಆಯೋಗ ಸದಸ್ಯರು ನಿರ್ದೇಶನ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಎಫ್. ದೊಡ್ಡಮನಿ, ಜಿಪಂ ಸಿಇಒ ಸ್ವರೂಪ ಟಿ.ಕೆ. ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ