ಕನ್ನಡಪ್ರಭ ವಾರ್ತೆ ಕಾರವಾರ
ಕಾರವಾರದಲ್ಲಿ 2, ಕುಮಟಾ 1 ಮತ್ತು ಅಂಕೋಲಾದ 1 ಸೇರಿದಂತೆ ಒಟ್ಟು 4 ಕಾಳಜಿ ಕೇಂದ್ರಗಳಲ್ಲಿ 205 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.
ಮುಂಡಗೋಡದಲ್ಲಿ ಭಾರಿ ಮಳೆಯಾಗುತ್ತಿದೆ. ಗುರುವಾರ ಒಂದೇ ದಿನದಲ್ಲಿ 14 ಮನೆಗಳಿಗೆ ಹಾನಿ ಉಂಟಾಗಿದೆ. ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ.ಕಾರವಾರದಲ್ಲಿ ಭಾರಿ ಬಿರುಗಾಳಿ, ಮಳೆಗೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕೊರಗಿವೆ. ನಗರಾದ್ಯಂತ ವಿದ್ಯುತ್ ನಿಲುಗಡೆಯಾಗಿದೆ. ಭಟ್ಕಳ, ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರಗಳಲ್ಲಿ ಆಗಾಗ ಭಾರಿ ಮಳೆಯಾಗುತ್ತಿದೆ. ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೋಯಿಡಾಗಳಲ್ಲಿ ಸಹ ವ್ಯಾಪಕ ಮಳೆಯಾಗುತ್ತಿದೆ. ಮಳೆಯೊಂದಿಗೆ ಬಿರುಗಾಳಿ ಆಗಾಗ ಬೀಸುತ್ತಿದೆ.
ಉರುಳಿದ ಮರ, ವಿದ್ಯುತ್ ಕಂಬಗಳು: ಕಾರವಾರ ನಗರದಲ್ಲಿ ಗುರುವಾರ ಭಾರಿ ಬಿರುಗಾಳಿಗೆ ಕೆಲವೆಡೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿದ್ದು, ನಗರಾದ್ಯಂತ ವಿದ್ಯುತ್ ವ್ಯತ್ಯಯವಾಗಿದೆ.ಸಂಜೆ 4.45ರ ಸುಮಾರಿಗೆ ಏಕಾಏಕಿ ಬಿರುಗಾಳಿ ಉಂಟಾಗಿ, ಮಳೆಯೂ ಸುರಿಯಿತು. ಹಠಾತ್ ಬಿರುಗಾಳಿ ಬೀಸುತ್ತಿದ್ದಂತೆ ಜನರು ಸೂರು ಸಿಕ್ಕತ್ತ ಓಡಿ ಆಶ್ರಯ ಪಡೆದರು. ಕೆಎಚ್ ಬಿ ಕಾಲನಿ, ಗಿಂಡಿ ದೇವಾಲಯ, ಗುನಗಿವಾಡ ಮತ್ತಿತರ ಕಡೆ ವಿದ್ಯುತ್ ಕಂಬಗಳು ಉರುಳಿವೆ. ಕುಂಠಿ ಮಹಮ್ಮಾಯಿ ದೇವಾಲಯ, ಗಿಂಡಿ ದೇವಸ್ಥಾನ ಮತ್ತಿತರ ಕಡೆ ಮರಗಳು ಹಾಗೂ ಮರದ ಟೊಂಗೆಗಳು ನೆಲಕ್ಕುರುಳಿವೆ. ಗಿಂಡಿ ದೇವಾಲಯ ಬಳಿ ಟ್ರಾನ್ಸಫಾರ್ಮರ್ ಸಹ ಬೀಳುವ ಹಂತದಲ್ಲಿದೆ.ನಗರದಲ್ಲಿ ಮೇಲಿಂದ ಮೇಲೆ ವಿದ್ಯುತ್ ವೈಫಲ್ಯ ಉಂಟಾಗುತ್ತಿತ್ತು. ಈಗ ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಉರುಳಿಬೀಳುತ್ತಿದ್ದಂತೆ ವಿದ್ಯುತ್ ಕಣ್ಮರೆಯಾಗಿದೆ.