ರಾಣಿಬೆನ್ನೂರು: ಅನಧಿಕೃತ ಕಸಾಯಿಖಾನೆಯಲ್ಲಿ ಗೋ-ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಅನ್ಯ ಕೋಮಿನವರಿಂದ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆಯಾದ ಘಟನೆ ಭಾನುವಾರ ನಗರದ ಕತಿಬ್‌ಗಲ್ಲಿಯಲ್ಲಿ ನಡೆದಿದೆ.ಇಲ್ಲಿಯ ಮಾರುತಿ ನಗರದ ನಿವಾಸಿ ಬಜರಂಗದ ಕಾರ್ಯಕರ್ತ ರುದ್ರೇಶ ಬುಕ್ಕಶೆಟ್ಟಿ ಗಾಯಗೊಂಡ ಯುವಕ.ಕಳೆದ ವಾರದಿಂದ ನಗರದ ವಿವಿಧ ಕಡೆಗಳಲ್ಲಿ ಅಕ್ರಮ ಕಸಾಯಿಖಾನೆಗಳ ಕುರಿತು ಬಜರಂಗದಳ ಕಾರ್ಯಕರ್ತರು ಪೊಲೀಸ್ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮಕೊಳ್ಳಲು ಮನವಿ ಸಲ್ಲಿಕೆ ಮಾಡಿದ್ದರು. ಈ ಕುರಿತು ಅಧಿಕಾರಿಗಳ ಅಕ್ರಮ ಕಸಾಯಿಖಾನೆ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿತ್ತು. ಆದರೂ ನಗರದ ಕೆಲವೊಂದು ಕಡೆಗಳಲ್ಲಿ ಅಕ್ರಮ ಕಸಾಯಿಖಾನೆಗಳು ನಡೆಯುತ್ತಿದ್ದು ಮಾಹಿತಿಯನ್ನು ನೀಡಲಾಗಿತ್ತು. ಪೊಲೀಸರಿಗೆ ಸ್ಥಳ ತೋರಿಸಲು ಬಜರಂಗದಳ ಕಾರ್ಯಕರ್ತರು ಮುಂದಾದ ಸಮಯದಲ್ಲಿ ಅನ್ಯ ಕೋಮಿನ ಜನರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಓರ್ವ ಯುವಕನ ತಲೆಗೆ ಹಾಕಿ ಬ್ಯಾಟ್‌ನಿಂದ ಹೊಡೆದಿದ್ದಾರೆ. ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಪ್ಪಿತಸ್ಥರನ್ನು ಬಂಧಿಸಲು ಆಗ್ರಹ: ನಗರದಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿಖಾನೆಗಳ ಬಂದ್ ಮಾಡಿಸುವ ಕುರಿತು ಈಗಾಗಲೇ ಮನವಿ ಸಲ್ಲಿಕೆ ಮಾಡಿ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ತಿಳಿಸಲಾಗಿತ್ತು. ಆ ನಿಟ್ಟಿನಲ್ಲಿ ಪೊಲೀಸರಿಗೆ ಮಾಹಿತಿ ನೀಡುವ ಸಮಯದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಖೇದಕರ ಸಂಗತಿಯಾಗಿದೆ. ಈ ಕುರಿತು ಈಗಾಗಲೇ ಪ್ರಕರಣ ದಾಖಲು ಮಾಡಲಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ರಾಣಿಬೆನ್ನೂರು ಬಂದ್ ಕರೆ ನೀಡಲಾಗುವುದು. ಇದರ ಸಲುವಾಗಿ ಬಜರಂಗದಳದ ರಾಜ್ಯ ಸಂಘಟನೆ ವತಿಯಿಂದ ರಾಣಿಬೆನ್ನೂರು ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು. ನಮಗೆ ಕಾನೂನು ಮೇಲೆ ಗೌರವವಿದೆ. ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು. ನಗರದಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಬೇಕು ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಅನಿಲ್ ಹಲವಾಗಲ ಹಾಗೂ ಸಹ ಸಂಚಾಲಕ ವಿನಯ ಬಾಳನಗೌಡ್ರ ಆಗ್ರಹಿಸಿದರು.