ಕಾರಟಗಿ: ತಾಲೂಕಿನ ಬೂದುಗುಂಪಾ ಸೀಮೆಯಲ್ಲಿ ಅಂದರ್ ಬಾಹರ್ ಅಡ್ಡೆಯ ಮೇಲೆ ಗಂಗಾವತಿ ಡಿವೈಎಸ್ಪಿ ಜಯಪ್ಪ ನ್ಯಾಮೇಗೌಡರ್ ನೇತೃತ್ವದಲ್ಲಿನ ತಂಡದ ದಾಳಿ ನಡೆಸಿರುವುದು ಭಾರಿ ಸಂಚಲನ ಮೂಡಿಸಿದೆ.
ಮಹಿಳೆಯರ ಮಾಹಿತಿ: ಬೂದುಗುಂಪಾದ ಕೆಲವು ಮಹಿಳೆಯರು ಡಿವೈಎಸ್ಪಿ ಕಚೇರಿಗೆ ಈ ಕುರಿತು ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಕೋಟ್ಯಂತರ ರು. ವಹಿವಾಟು ಅಂದರ್ ಬಾಹರ್ ದಂಧೆ ಮೂಲಕ ನಡೆಯುತ್ತಿದೆ. ಈ ದಂಧೆಗೆ ಕಡಿವಾಣ ಹಾಕಿ, ಬಡ ಕುಟುಂಬಗಳನ್ನು ಉಳಿಸಿ ಎಂದು ಕೋರಿದ್ದರು. ಈ ಮಾಹಿತಿ ಆಧರಿಸಿ ಮತ್ತು ಡಿವೈಎಸ್ಪಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಗುಡ್ಡದ ದಾಳಿ: ದಾಳಿಯ ವೇಳೆ ಪೊಲೀಸರನ್ನು ನೋಡಿ ೫೦ಕ್ಕೂ ಹೆಚ್ಚು ಜೂಜೂಕೋರರು ಗುಡ್ಡಗಾಡು ತಪ್ಪಲಿನಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ, ೪೫ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಪತ್ತೆಯಾಗಿವೆ.ದಾಳಿಗೆ ಮುನ್ನ ವಿಶೇಷ ತಂಡ ದಂಧೆಕೋರರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪೇದೆಗಳ ಚಲನವಲನದ ಮೇಲೆ ನಿಗಾ ಇಟ್ಟಿದೆ.
ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧ ಕಾರಟಗಿ ಪೊಲೀಸರು ಪ್ರಕರಣ ದಾಖಲಿಸಿದ್ದು, ೧೨ ದ್ವಿಚಕ್ರ ವಾಹನ ದೊರೆತಿದೆ ಎಂದು ನಮೂದಿಸಿದ್ದಾರೆ ಮತ್ತು ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಮರಳು ಅಡ್ಡೆ: ಅಂದರ್ ಬಾಹರ್ ಅಡ್ಡೆಯ ಮೇಲೆ ದಾಳಿ ನಡೆಸಿದ ಬಳಿಕ ಮುಂದೆ ನವಲಿ ಬಳಿ ಅಕ್ರಮ ಮರಳು ಅಡ್ಡೆಯ ಮೇಲೂ ಈ ತಂಡ ದಾಳಿ ನಡೆಸಿದೆ. ಮೂರು ಟಿಪ್ಪರ್, ಒಂದ ಜೆಸಿಬಿ ಮತ್ತು ಒಂದು ಹಿಟಾಚಿ ವಶ ಪಡೆಸಿಕೊಂಡು ಕನಕಗಿರಿ ಠಾಣೆಗೆ ಪ್ರಕರಣ ದಾಖಲಿಸಲು ಒಪ್ಪಿಸಿದೆ.