ಪಾರದರ್ಶಕವಾಗಿ ಮನೆಗಳ ಹಂಚಿಕೆ: ಶಾಸಕಿ ಅನ್ನಪೂರ್ಣ ತುಕಾರಾಂ

KannadaprabhaNewsNetwork |  
Published : Dec 02, 2025, 02:00 AM IST
ಸ | Kannada Prabha

ಸಾರಾಂಶ

ವಸತಿ ರಹಿತರಿಗೆ ಸೂರನ್ನು ಕಲ್ಪಿಸುವ ಉದ್ದೇಶದೊಂದಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಜಿ ೨ ಮಾದರಿಯಲ್ಲಿ ೨೧೭೨ ಮನೆಗಳನ್ನು ನಿರ್ಮಿಸುತ್ತಿದೆ.

ಸಂಡೂರು: ಪಟ್ಟಣದಲ್ಲಿ ವಸತಿ ರಹಿತರಿಗೆ ಸೂರನ್ನು ಕಲ್ಪಿಸುವ ಉದ್ದೇಶದೊಂದಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಜಿ+೨ ಮಾದರಿಯಲ್ಲಿ ೨೧೭೨ ಮನೆಗಳನ್ನು ನಿರ್ಮಿಸುತ್ತಿದೆ. ಇವುಗಳಲ್ಲಿ ಮುಕ್ತಾಯ ಹಂತದಲ್ಲಿರುವ ೬೦೦ ಮನೆಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ವಸತಿ ರಹಿತರಿಗೆ ಹಂಚಿಕೆ ಮಾಡಲಾಗುತ್ತಿದೆ. ಜನತೆ ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕಿ ಅನ್ನಪೂರ್ಣ ಈ ತುಕಾರಾಂ ತಿಳಿಸಿದರು.ಪಟ್ಟಣದ ಪುರಸಭೆ ಕಚೇರಿಯ ಆವರಣದಲ್ಲಿ ಸೋಮವಾರ ಲಾಟರಿ ಮೂಲಕ ಗುಂಪುಮನೆಗಳನ್ನು ವಸತಿ ರಹಿತರಿಗೆ ಹಂಚಿಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಂಚಿಕೆ ಮಾಡಲಾಗಿರುವ ೬೦೦ ಮನೆಗಳು ಇನ್ನು ಎರಡು ತಿಂಗಳಲ್ಲಿ ಪೂರ್ಣವಾಗಲಿವೆ. ಒಟ್ಟು ೨೧೭೨ ಮನೆಗಳಲ್ಲಿ ೬೪೨ ಮನೆಗಳಿಗೆ ಜಾಗದ ಕೊರತೆಯಾಗಿದೆ. ಈ ಮನೆಗಳಿಗೆ ಧರ್ಮಾಪುರದ ಬಳಿಯಲ್ಲಿ ಜಾಗಕ್ಕಾಗಿ ಹುಡುಕಾಟ ನಡೆದಿದೆ. ಹಂಚಿಕೆಯಾಗಿರುವ ಮನೆಗಳನ್ನು ಬಾಡಿಗೆಗೆ ಕೊಡುವ ಹಾಗಿಲ್ಲ. ೧೫ ವರ್ಷದವರೆಗೆ ಪರಭಾರೆ ಮಾಡುವಂತಿಲ್ಲ. ಪ್ರತಿ ಬ್ಲಾಕ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ವಸತಿ ರಹಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಜನತೆ ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಬಿ.ವಿನಯ್‌ಕುಮಾರ್‌ಗೌಡ ಮಾತನಾಡಿ, ಪ್ರತಿ ಮನೆಗೆ ₹೬.೨೫ ಲಕ್ಷ ವೆಚ್ಚವಾಗಲಿದೆ. ಇದರಲ್ಲಿ ಕೇಂದ್ರ ಸರ್ಕಾರದ ₹೧.೫೦ ಲಕ್ಷ, ರಾಜ್ಯ ಸರ್ಕಾರದ ₹೨ ಲಕ್ಷ ಹಾಗೂ ಡಿಎಂಎಫ್ ಅನುದಾನ ₹೧ ಲಕ್ಷ ಅನುದಾನ ದೊರೆಯಲಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದವರು ₹೧.೭೫ ಲಕ್ಷ ಹಾಗೂ ಸಾಮಾನ್ಯ ವರ್ಗದವರು ₹೨.೨೫ ಲಕ್ಷ ವಂತಿಗೆಯನ್ನು ನೀಡಬೇಕು. ಲೋನ್ ಮೂಲಕ ಅಥವಾ ನಗದು ಹಣವನ್ನು ತುಂಬಬಹುದಾಗಿದೆ. ಹಂಚಿಕೆಯಾಗುತ್ತಿರುವ ೬೦೦ ಮನೆಗಳಲ್ಲಿ ೩೯೩ ಸಾಮಾನ್ಯ ವರ್ಗಕ್ಕೆ, ಪರಿಶಿಷ್ಟ ಜಾತಿಗೆ ೯೮ ಹಾಗೂ ಪರಿಶಿಷ್ಟ ಪಂಗಡಕ್ಕೆ ೧೦೯ ಮನೆಗಳನ್ನು ಉಂಚಿಕೆ ಮಾಡಲಾಗುತ್ತಿದೆ. ಉಳಿದ ಮನೆಗಳನ್ನು ಇನ್ನು ೫-೬ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಪೂರ್ಣಗೊಂಡ ನಂತರ, ಉಳಿದ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುರಸಭೆಯ ಆಡಳಿತಾಧಿಕಾರಿ ಪಿ. ಪ್ರಮೋದ್ ಮಾತನಾಡಿ, ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಗ್ರೇಡ್ ೨ ತಹಶೀಲ್ದಾರ್ ಸುಧಾ ಅರಮನೆ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅಕ್ಷಯ್ ಲಾಡ್, ಪುರಸಭೆಯ ಸಿಬ್ಬಂದಿ, ನೂರಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ
ರಾಜ್ಯ ರಾಜಕೀಯ ವಿಚಾರ : ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ