ಬಸವತತ್ವದ ಶ್ರೀಗಳು ತಾಲಿಬಾನಿಗಳು: ಕನ್ಹೇರಿ ಸ್ವಾಮೀಜಿಯಿಂದ ಹೊಸ ವಿವಾದ

KannadaprabhaNewsNetwork |  
Published : Dec 02, 2025, 02:00 AM IST
Swamiji

ಸಾರಾಂಶ

  ಮಹಾರಾಷ್ಟ್ರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ - ಬಸವತತ್ವದ ಶ್ರೀಗಳು ತಾಲಿಬಾನಿಗಳು: ಕನ್ಹೇರಿ ಸ್ವಾಮೀಜಿಯಿಂದ ಹೊಸ ವಿವಾದ

  ಬೆಳಗಾವಿ :  ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕಿಳಿದ ಮಠಾಧೀಶರ ಕುರಿತು ಇತ್ತೀಚೆಗೆ ಅವಾಚ್ಯ ಪದ ಬಳಸಿ ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳ ಪ್ರವೇಶಕ್ಕೆ ನಿರ್ಬಂಧ ಹೇರಿಸಿಕೊಂಡಿದ್ದ ಮಹಾರಾಷ್ಟ್ರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಸವತತ್ವದ ಕಾವಿಧಾರಿಗಳನ್ನು ‘ಬಸವ ತಾಲಿಬಾನಿಗಳು’ ಎಂದು ಕರೆದಿದ್ದಾರೆ.

ಅವರ ಈ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಕೆಲ ಮಠಾಧೀಶರು ಅವರು ‘ಕಾಡಸಿದ್ಧೇಶ್ವರ ಅಲ್ಲ, ಕಾಡು ಪ್ರಾಣಿ’ ಎಂದು ಜರಿದಿದ್ದಾರೆ. 

ಕನ್ಹೇರಿ ಶ್ರೀಗಳು ಹೇಳಿದ್ದೇನು?:

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಘಟಕಗಳಿಂದ ಆಯೋಜಿಸಿದ್ದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಕಾವಿ ಧರಿಸಿದ ‘ಬಸವ ತಾಲಿಬಾನಿಗಳು’ ಹನುಮ ಮಾಲೆ ಸೇರಿದಂತೆ ಹಿಂದೂ ಆಚರಣೆಗಳ ಕುರಿತು ಟೀಕೆ ಮಾಡುತ್ತಾರೆ. ಕೆಲವು ಮಠಾಧೀಶರು ರಾತ್ರಿ ಟೀ ಶರ್ಟ್‌, ಬರ್ಮುಡಾ ಧರಿಸಿಕೊಂಡು ಹೋಟೆಲ್‌ ಹಾಗೂ ಬಾರ್‌ಗಳಿಗೆ ಹೋಗುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಈ ಹನುಮ ಮಾಲೆಯೂ ಪೊಲೀಸ್ ಇದ್ದಹಾಗೆ. ಇದು ನಮ್ಮನ್ನು ಕೆಟ್ಟ ಕೆಲಸ ಮಾಡಲು ಬಿಡುವುದಿಲ್ಲ. ಏನಾದರೂ ತಪ್ಪು ಕೆಲಸ ಮಾಡಲು ಹೊರಟರೆ, ಮಾಲೆ ನಮ್ಮನ್ನು ತಡೆಯುತ್ತದೆ. ನಮ್ಮಲ್ಲಿ ಪಂಢರಾಪುರಕ್ಕೆ ಹೋಗುವವರು ಮಾಲೆ ಹಾಕಿಕೊಳ್ಳುತ್ತಾರೆ. ಅವರು ಮದ್ಯದಂಗಡಿ ಕಡೆ ಹೊರಟರೆ, ಕೊರಳಿನಲ್ಲಿರುವ ಪೊಲೀಸ್ (ಮಾಲೆ) ಅವರನ್ನು ತಡೆಯುತ್ತದೆ. ಈ ಮಾಲೆ ಮಾತನಾಡುವುದಿಲ್ಲ. ಆದರೆ, ದುಶ್ಚಟ ಮಾಡಲು ಹೊರಡುವವರಿಗೆ ನಾನು ಕೊರಳಲ್ಲಿ ಇದ್ದೇನೆ. ಈ ಕಡೆ ಬಾ ಎಂದು ಕರೆಯುತ್ತದೆ ಎಂದು ಹೇಳಿದರು.

ಹೇಳಿಕೆಗೆ ಭಾರಿ ಆಕ್ರೋಶ:

ಕನ್ಹೇರಿ ಶ್ರೀಗಳ ಹೇಳಿಕೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಬೀದರ್‌ನ ಡಾ.ಚನ್ನಬಸವಾನಂದ ಸ್ವಾಮೀಜಿ ಹಾಗೂ ವಿಜಯಪುರ ಸಂಗನಬಸವ ಸ್ವಾಮೀಜಿ‌ ಅವರು ಖಂಡಿಸಿದ್ದಾರೆ.

ಸೋಮವಾರ ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಚನ್ನಬಸವಾನಂದ ಸ್ವಾಮೀಜಿ, ಕನ್ಹೇರಿ ಶ್ರೀಗಳನ್ನು ಸ್ವಾಮೀಜಿಗಳು ಅನ್ನಲು ನಮಗೆ ನಾಚಿಕೆ ಆಗುತ್ತದೆ. ಅವರು ಕಾಡಸಿದ್ಧೇಶ್ವರ ಸ್ವಾಮೀಜಿ ಅಲ್ಲ, ಅದು ಕಾಡು ಪ್ರಾಣಿ. ಅವರ ನಾಲಿಗೆಗೆ ಸಂಸ್ಕಾರ ಇಲ್ಲ. ಬಾಯಿ ಬಿಚ್ಚಿದರೆ ಮುತ್ತುಗಳೇ ಉದುರುತ್ತವೆ. ಆ ತರಹ ಬೈಗುಳಗಳನ್ನು ಬೈಯುತ್ತಾರೆ. ಇಂತಹವರು ಕಾವಿ ಬಟ್ಟೆ ಹಾಕಲು ಅಯೋಗ್ಯರು, ನಾಲಾಯಕರಾಗಿದ್ದಾರೆ ಎಂದು ಕಿಡಿಕಾರಿದರು.

ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದವರು ಮನುವಾದಿಗಳು ಮತ್ತು ಬಸವತತ್ವದ ವಿರೋಧಿಗಳು. ಅವರನ್ನು ಸಂತೋಷಪಡಿಸಲು ಕನ್ಹೇರಿ ಶ್ರೀಗಳು ಪದೇ ಪದೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು. ಇದೇ ರೀತಿ ಬಸವ ತತ್ವದವರ ಕುರಿತು ಮತ್ತೆ ನಾಲಿಗೆ ಹರಿಬಿಟ್ಟರೆ ಮಾನನಷ್ಟ ಮೊಕದ್ದಮೆ ಹಾಕಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನು ವಿಜಯಪುರದಲ್ಲಿ ಮಾತನಾಡಿದ ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿ‌, ಕೆಲ ಸ್ವಾಮೀಜಿಗಳು ಬರ್ಮುಡಾ ಎಂದು ಕನ್ಹೇರಿ ಶ್ರೀಗಳು ಹೇಳಿದ್ದಾರೆ. ಅವರ ಕಣ್ಣಿಗೆ ಕಂಡ ಯಾವ ಸ್ವಾಮೀಜಿ ಹಾಕಿದ್ದಾರೆ? ಅವರೇ ಹೇಳಬೇಕು. ಎಲ್ಲೋ ಒಬ್ಬ ಸ್ವಾಮೀಜಿ ಹಾಗೇ ಕಂಡಿದ್ದಕ್ಕೆ ಎಲ್ಲರನ್ನು ದೂಷಿಸುವುದು ಸರಿಯಲ್ಲ. ಅವರು ಬಸವ ತಾಲಿಬಾನಿಗಳು ಎಂದಿದ್ದರೆ ನಾನು ಒಪ್ಪಲ್ಲ. ಅದನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ