ಜಿಲ್ಲೆಯಲ್ಲಿ ತಾಯಿ-ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮವಹಿಸಿ: ಸಚಿವ ದಿನೇಶ್ ಗುಂಡೂರಾವ್

KannadaprabhaNewsNetwork |  
Published : Dec 02, 2025, 02:00 AM IST
ಪೊಟೊ: 30ಎಸ್‌ಎಂಜಿಕೆಪಿ06ಶಿವಮೊಗ್ಗದ ಡಿಎಚ್‌ಒ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಅಗತ್ಯವಾದ ಎಲ್ಲ‌ ಕ್ರಮ ವಹಿಸಬೇಕು. ಜೊತೆಗೆ ಲಿಂಗಾನುಪಾತ ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಅಗತ್ಯವಾದ ಎಲ್ಲ‌ ಕ್ರಮ ವಹಿಸಬೇಕು. ಜೊತೆಗೆ ಲಿಂಗಾನುಪಾತ ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

ಡಿಎಚ್ ಒ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಯಿ ಮತ್ತು ಶಿಶು‌ ಮರಣ ಪ್ರಮಾಣ ತಗ್ಗಿಸಲು ಹೈರಿಸ್ಕ್ ಗರ್ಭಿಣಿಯರ ಕುರಿತು ಕಡ್ಡಾಯವಾಗಿ ಶೇ.100 ಟ್ರ್ಯಾಕ್ ಆಗಬೇಕು. ಎಎನ್‌ಸಿ ನೋಂದಣಿ ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಆಗುವಂತೆ ನೋಡಿಕೊಳ್ಳಬೇಕು.

ತಾಯಿ ಮರಣ ಪ್ರಮಾಣ 80 ಇದ್ದು ಹೊರ ಜಿಲ್ಲೆಗಳ ಗಂಭೀರ ಪ್ರಕರಣಗಳಿಂದಾಗಿ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಶಿಶು ಮರಣ 15.1 ಇದ್ದು, ಕಳೆದ ಸಾಲಿಗಿಂತ ಕಡಿಮೆ ಆಗಿದೆ. ತಾಯಿ ಮತ್ತು ಶಿಶು ಮರಣ ಪ್ರಮಾಣ ರಾಜ್ಯ ಸರಾಸರಿಗಿಂತ ಹೆಚ್ಚಿದ್ದು ಇದನ್ನು ಕಡಿತಗೊಳಿಸಲು ಸೂಕ್ತ ಕ್ರಮ‌ಕೈಗೊಳ್ಳಬೇಕು ಎಂದು ಸೂಚಿಸಿದರು.

ಲಿಂಗಾನುಪಾತ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಸೊರಬ, ಶಿವಮೊಗ್ಗ, ಭದ್ರಾವತಿ ಕಡಿಮೆ ಇದ್ದು ಯಾಕೆಂದು ತಿಳಿದು ಕ್ರಮ‌ ವಹಿಸಬೇಕು. ಲಿಂಗ ಪತ್ತೆ ಹಚ್ಚುವ ಕಾರ್ಯವೆಲ್ಲಾದರೂ ನಡೆಯುತ್ತಿದೆಯೋ ಎಂದು ಪತ್ತೆ ಹಚ್ಚಬೇಕು. ಎಎನ್ಸಿ ನೋಂದಣಿ ಕಡ್ಡಾಯವಾಗಿ ಮಾಡಿಸಿ. ವಿಳಂಬ ನೋಂದಣಿಯಲ್ಲಿ ಲಿಂಗಾನುಪಾತ ಪತ್ತೆ ಹಚ್ಚಿ ವರದಿ ನೀಡುವಂತೆ ತಿಳಿಸಿದರು.

ಸಿಹೆಚ್ ಸಿ ಗಳಲ್ಲಿ ಹೆರಿಗೆ ಪ್ರಮಾಣ ಕಡಿಮೆ ಇದೆ. ಹೆರಿಗೆ ಅತಿ ಕಡಿಮೆ ಇರುವ ಸಿಹೆಚ್ ಸಿ ಯಿಂದ ಪ್ರಸೂತಿ‌ ಮತ್ತು ಅರವಳಿಕೆ ತಜ್ಞ ವೈದ್ಯರನ್ನು‌ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸಿ 24/7 ಕೆಲಸ ಮಾಡುವಂತೆ ಕ್ರಮ‌ವಹಿಸಬಹುದು ಎಂದ ಅವರು ತಾಲೂಕು ಆಸ್ಪತ್ರೆಗಳನ್ನು ಹೆಚ್ಚಿನ ಮಟ್ಟದಲ್ಲಿ ಸುಧಾರಣೆ ಮಾಡಬೇಕು. ಆಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೂ ಹೊರೆ ಕಡಿಮೆ ಆಗುತ್ತದೆ ಎಂದರು.

ಜಿಲ್ಲೆಯಲ್ಲಿ 14887 ಹೆರಿಗೆ ಆಗಿದ್ದು, ಶೇ.52.21 ಸಿಜೇರಿಯನ್ ಶಸ್ತ್ರ ಚಿಕಿತ್ಸೆ ನಡೆದಿದೆ. ಜಿಲ್ಲೆಯಲ್ಲಿ ಎಂಆರ್ 1, 2 ನೇ ಡೋಸ್ ಲಸಿಕೆ ಶೇ.91 ಆಗಿದೆ. ರಾಜ್ಯ ಸರಾಸರಿ ಶೇ. 95 ಇದ್ದು, ಖಾಸಗಿ ಆಸ್ಪತ್ರೆಯಲ್ಲಿ ನೀಡುತ್ತಿರುವ ಎಂ ಆರ್ ಲಸಿಕೆ ಪ್ರಮಾಣವನ್ನೂ ಪರಿಶೀಲಿಸಬೇಕು ಎಂದು ಸೂಚಿಸಿದರು.

ಮಕ್ಕಳನ್ನು ತಪಾಸಣೆಗೆ ಒಳಡಿಸಿದ್ದು, ಶೇ.6.5 ತೀವ್ರವಲ್ಲದ(ಮೈಲ್ಡ್) ಶೇ.5.7 ಮಧ್ಯಮ(ಮಾಡರೇಟ್) ಮತ್ತು , 0.04 ತೀವ್ರ (ಸಿವಿಯರ್) ಅನಿಮಿಯಾ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದು, ಚಿಕಿತ್ಸೆ ಮುಗಿದ ನಂತರ ಮುಂದಿನ ತಿಂಗಳು‌ ವರದಿ ನೀಡುವಂತೆ ಸೂಚಿಸಿದರು.

ಡಾ. ಪುನೀತ್ ಹೃದಯ ಜ್ಯೋತಿ ಕಾರ್ಯಕ್ರಮದಡಿ ಎಐ ಮೂಲಕ ಹೃದಯ ಕಾಯಿಲೆ ಪತ್ತೆ ಮಾಡಿ, ಗಂಭೀರವಾಗಿದ್ದರೆ ವೈದ್ಯರಿಗೆ ರೆಫರ್ ಮಾಡಿ ಚಿಕಿತ್ಸೆ ನೀಡಲಾಗುವುದು. ಈ ಕಾರ್ಯಕ್ರಮದಡಿ ಹಲವಾರು ಜೀವ ಉಳಿಸಲಾಗಿದ್ದು ಈ ಬಾರಿ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಈ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದರು.

ಕೆಎಫ್ ಡಿ ಎಚ್ಚರ ವಹಿಸಿ: ಈ ಬಾರಿ ಕೆಎಫ್‌ಡಿ ನಿಯಂತ್ರಣಕ್ಕೆ ಅತಿ ಎಚ್ಚರಿಕೆಯಿಂದ ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದರು.

2025ನೇ ಸಾಲಿನಿಂದ ಇಲ್ಲಿಯವರೆಗೆ ಕೆಎಫ್‌ಡಿ ಪತ್ತೆಗೆ 7155 ಪರೀಕ್ಷೆ ನಡೆಸಲಾಗಿದ್ದು, 72 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 02 ಮರಣ ಸಂಭವಿಸಿರುತ್ತದೆ. 450 ಉಣ್ಣೆ ಸಂಗ್ರಹ, 229 ಮಂಗಗಳ ಸಾವು ಸಂಭವಿಸಿದೆ ಎಂದು ವಿಡಿಎಲ್ ನ ಡಿಸಿಎಂಒ ಡಾ.ಹರ್ಷವರ್ದನ್ ತಿಳಿಸಿದರು.

ಮಂಗನ ಸಾವು ಕುರಿತು ಕೂಡಲೇ ವರದಿ‌ ಮಾಡಬೇಕು. ಕೆಎಫ್ ಡಿ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ಕ್ರಮ‌ವಹಿಸಬೇಕು.ಈ ವರ್ಷ ಬಹಳ ಜಾಗೃತೆಯಿಂದ ಇದ್ದು ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಕೆಎಫ್ ಡಿ ಪರೀಕ್ಷೆಗೆ ಶಿರಸಿಯಲ್ಲಿ ಪ್ರಯೋಗಾಲಯ ಆರಂಭಿಸಲು ಅನುಮತಿ ದೊರೆತಿದ್ದು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಈವರೆಗೆ 143 ಡೆಂಘೀ, ಚಿಗುನ್ ಗುನ್ಯ 64 ಮತ್ತು ಮಲೇರಿಯಾ 31 ಪ್ರಕರಣಗಳು ದಾಖಲಾಗಿದೆ. ಟಿಬಿ ಪರೀಕ್ಷೆಯಲ್ಲಿ ಶೇ.99 ಪ್ರಗತಿ ಸಾಧಿಸಲಾಗಿದ್ದು 1492 ಜನ ಚಿಕಿತ್ಸೆಯಲ್ಲಿದ್ದಾರೆ ಎಂದು ತಿಳಿಸಿದರು. ಕುಷ್ಟರೋಗ 32 ಪಾಸಿಟಿವ್ ಇದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ 72% ಸಾಧನೆ ಮಾಡಲಾಗಿದೆ. ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಕನ್ನಡಕ ನೀಡುವ ಆಶಾಕಿರಣ ಕೇಂದ್ರಗಳನ್ನು ರಾಜ್ಯಾದ್ಯಂತ ತೆರೆಯಲಾಗಿದ್ದು ಜಿಲ್ಲೆಯ 14 ಕಡೆ ಮತ್ತು ರಾಜ್ಯದಲ್ಲಿ 398 ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ತಾಲೂಕು ಆಸ್ಪತ್ರೆಯಲ್ಲಿ ಇಬ್ಬರು ಪ್ರಸೂತಿ ಮತ್ತು ಅರವಳಿಕೆ ತಜ್ಞರು ನೇಮಕ ಮಾಡಲು‌ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ‌ ಜಿಲ್ಲಾ ನೋಡಲ್ ಅಧಿಕಾರಿ ಡಾ.ರಘುನಂದನ್, ಡಿಎಚ್‌ಒ ಡಾ.ನಟರಾಜ್, ಎನ್ ವಿಬಿಡಿಸಿಪಿ ಅಧಿಕಾರಿ ಡಾ.ಗುಡುದಪ್ಪ ಕಸಬಿ, ಡಿಎಸ್ ಓ ಡಾ.ನಾಗರಾಜ ನಾಯ್ಕ್ , ಆರ್‌ಸಿಎಚ್‌ಒ ಡಾ.ಮಲ್ಲಪ್ಪ, ಡಿಎಲ್ ಒ ಡಾ.ಕಿರಣ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೌಕಾ ದಿನಾಚರಣೆಯಲ್ಲಿ ರಾಜ್ಯಪಾಲರು ಭಾಗಿ
ಡಿಸೆಂಬರ್‌ 10ರಿಂದ ಹುಕ್ಕೇರಿಮಠದ ಶ್ರೀಗಳಿಂದ ಹಾವೇರಿಯಲ್ಲಿ ಜನಜಾಗೃತಿ ಪಾದಯಾತ್ರೆ