ಗದಗ: ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಎಂದರೆ ಅಂಕಗಳನ್ನು ಹೆಚ್ಚಿಸುವ ಮಾತಲ್ಲ. ಅದು ಅವರ ಜೀವನದ ದೃಷ್ಟಿಕೋನವನ್ನು ಬದಲಿಸುವ ದೊಡ್ಡ ಹೊಣೆ. ಶಿಕ್ಷಕರು ಕಲಿಕೆಗೆ ಸ್ಫೂರ್ತಿ ನೀಡಿದಾಗ ಮಾತ್ರ ನಿಜವಾದ ಫಲಿತಾಂಶ ದೊರೆಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ ಹೇಳಿದರು.
ಇಂದಿನ ಮಕ್ಕಳು ಬದಲಾಗಿರುವ ತಂತ್ರಜ್ಞಾನ ಯುಗದಲ್ಲಿ ಕಲಿಯುತ್ತಿದ್ದಾರೆ. ಪುಸ್ತಕದ ಗಡಿಯಲ್ಲಿರುವ ಕಲಿಕೆ ಅವರಿಗೆ ಸಾಕಾಗುವುದಿಲ್ಲ. ತರಗತಿಯಲ್ಲಿ ಕುತೂಹಲ ಹುಟ್ಟಿಸಿ, ಪ್ರಶ್ನೆ ಕೇಳುವ ಚಟುವಟಿಕೆಯನ್ನು ಉತ್ತೇಜಿಸಿದರೆ ಅವರು ಕಲಿಕೆಯನ್ನು ಪ್ರೀತಿಸಲು ಆರಂಭಿಸುತ್ತಾರೆ. ಕಲಿಕೆ ಪ್ರೀತಿಯಾದಾಗಲೇ ಫಲಿತಾಂಶ ಸುಧಾರಿಸುತ್ತದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ, ಶಿಕ್ಷಣ ಸಂಯೋಜಕ ಮುರಳಿ ಸೋಲಾಪುರ ಮತ್ತು ಹಲವಾರು ವಿಷಯ ಸಂಪನ್ಮೂಲ ವ್ಯಕ್ತಿಗಳು ತಮ್ಮ ಅನುಭವ ಹಂಚಿಕೊಂಡರು. ಹೊಸ ಕಲಿಕೆ ತಂತ್ರಗಳು, ಪುನರಾವರ್ತನೆ ವಿಧಾನಗಳು, ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಮತ್ತು ವಿದ್ಯಾರ್ಥಿ-ಕೇಂದ್ರೀಕೃತ ಅಧ್ಯಯನ ಮಾರ್ಗಗಳನ್ನು ಶಿಕ್ಷಕರಿಗೆ ಪರಿಚಯಿಸಲಾಯಿತು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ಯಾಮ ಲಾಂಡೆ, ಎಂ.ಎ. ಯರಗುಡಿ, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್. ಬಡಿಗೇರ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಸೆಲ್ವ, ಕೆ.ವಿ. ಕೋರಡ್ಡಿ, ಸಿ.ಎಸ್. ಮಾನ್ವಿ, ಬಸವರಾಜ ಕುಂಬಾರ, ಮಹಾಂತೇಶ ವಡವಿ, ನೂರ ಅಹಮದ್ ನದಾಫ, ಮಾಲಾ ರಾಮನ್ನವರ, ಶರಣು ಗೌರಿ ಉಪಸ್ಥಿತರಿದ್ದರು. ಎಲ್ಲ ವಿಷಯಗಳ ವಿಷಯ ಶಿಕ್ಷಕರು ಭಾಗಿಯಾಗಿ ಕಾರ್ಯಗಾರದ ಸದುಪಯೋಗ ಪಡೆದರು.