ಚಿತ್ರದುರ್ಗ: ಮುಸ್ಲಿಂ ಯುವತಿಯ ಮನೆಗೆ ಡ್ರಾಪ್ ಮಾಡಿದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಥಳಿಸಿದ ಪ್ರಕರಣ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಶುಕ್ರವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದಾಗ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. 100ಕ್ಕೂ ಹೆಚ್ಚು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಕಡೆ ಹೊರಟಾದ ಪೊಲೀಸರು ಬ್ಯಾರಿಕೇಡ್‌ಗಳ ಇಟ್ಟು ತಡೆದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮನವಿ ಕೊಡಲು ಹೋಗುವರ ಯಾಕೆ ತಡೆಯುವಿರಿ ಎಂದು ಪ್ರಶ್ನಿಸಿದರು. ಪೊಲೀಸರೊಂದಿಗೆ ಮಾತಿನ ಜಟಾಪಟಿ ನಡೆಯಿತು. ನಂತರ ಕೇವಲ ಹತ್ತು ಮಂದಿಗೆ ಮಾತ್ರ ಅವಕಾಶ ನೀಡಲಾಯಿತು.ಚಿತ್ರದುರ್ಗ ನಗರದ ಬಟ್ಟೆ ಅಂಗಡಿಯಲ್ಲಿ ಜೊತೆಯಲ್ಲೇ ಕೆಲಸ ಮಾಡುವ ಮುಸ್ಲಿಂ ಯುವತಿ ಒಬ್ಬಳನ್ನು ಮನೆಯ ಹತ್ತಿರ ಬಿಡಲು ಹೋದ ಸಂದರ್ಭದಲ್ಲಿ ಏಕಾಏಕಿ ಮುಸ್ಲಿಂ ಯುವಕರು ಹಿಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕಳೆದ ಕೆಲವು ತಿಂಗಳಿಂದ ಜಿಹಾದಿ ಮಾನಸಿಕತೆಯ ಯುವಕರು ಮಿತಿಮೀರಿ ವರ್ತಿಸುತ್ತಿದ್ದಾರೆ. ಬೆಂಗಳೂರಿನ ಬನಶಂಕರಿ ಭಾಗದಲ್ಲಿ ಮುಸ್ಲಿಂ ಯುವಕರು ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. ಕಳೆದ 2 ದಿನಗಳ ಹಿಂದೆ ಚನ್ನಗಿರಿಯ ನಲ್ಲೂರಿನಲ್ಲಿ ರಾಮನವಮಿ ಆಚರಣೆ ಮಾಡುವ ಸಂದರ್ಭದಲ್ಲಿ ಜಿಹಾದಿಗಳು ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಬಲೆಗೆ ಕಾರಣ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಫಯಾಜ್ 9 ಬಾರಿ ಇರಿದು ಕೊಂದಿದ್ದಾನೆ ಎಂದು ಪ್ರತಿಭಟನಾಕಾರರು ದೂರಿದರು.ಹಿಂದೂಗಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಡಾಫೆಯ ಮಾತುಗಳನ್ನಾಡುತ್ತಿದೆ. ಚಿತ್ರದುರ್ಗದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ ಆರೋಪಿಯನ್ನು ಬಂಧಿಸದಿದ್ದರೆ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಆಗ್ರಹಿಸಿದರು.
ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಶ್ರೀಗಳು, ಯುವ ಮುಖಂಡ ರಘುಚಂದನ್, ವಿಶ್ವ ಹಿಂದು ಪರಿಷತ್‍ನ ರುದ್ರೇಶ್ ಭಜರಂಗ ದಳದ ಕರ್ನಾಟಕ ದಕ್ಷಿಣದ ಪ್ರಾಂತ ಸಯೋಜಕ ಪ್ರಭಂಜನ್, ಬಿಜೆಪಿ ಮುಖಂಡ ಡಾ.ಸಿದ್ಧಾರ್ಥ ಗುಂಡಾರ್ಪಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದರಿನಾಥ್, ಟೈಗರ್ ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.