ಕನ್ನಡಪ್ರಭ ವಾರ್ತೆ ಸಂಕೇಶ್ವರ
ಕನ್ನಡ ಧ್ವಜ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಫಲಕ ಅಳವಡಿಸಿದ್ದಕ್ಕೆ ಕನ್ನಡಿಗರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಸಮೀಪದ ಗಡಿಭಾಗ ಅಂಕಲಿ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದವರು ದೂರು ನೀಡಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.ಕನ್ನಡಿಗರಾದ ಬಸವರಾಜ ರಾಮಗೌಡ ಪಾಟೀಲ ಹಾಗೂ ಶುಭಂ ದುಂಡಪ್ಪ ಕಿವಂಡಾ ಅವರು ಡಿ.19 ರಂದು ಅಂಕಲಿ ಗ್ರಾಮದ ವೃತ್ತದಲ್ಲಿ ಕನ್ನಡಧ್ವಜ ಅಳವಡಿಸಿದ್ದರು. ಇದನ್ನು ಏಕೆ ಹಾಕಿದ್ದೀರಿ ಎಂದು ಆರೋಪಿತರಾದ ಅಂಕಲಿ ಗ್ರಾಮದ ಅಂಗದ ಮನೋಹರ ಕರಿಮೆ, ಅನಿಕೇತ ಕರಿಮೆ, ಶಾಹು ಮಗದುಮ್ಮ, ನಾಗರಾಜ ಪವಾರ, ಹೇಮಂತ ಅಜರೇಕರ್ ಅವರು ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಸಂಕೇಶ್ವರ ಪೊಲೀಸರು ಆರೋಪಿತರ ಬಂಧನಕ್ಕೆ ಮೀನಮೇಷ ಎಣಿಸುತ್ತಿದ್ದಂತೆ ಕನ್ನಡಿಗರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಚ್ಚೆತ್ತ ಎಸ್ಪಿ ಭೀಮಾಶಂಕರ ಗುಳೆದ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಗಡಿ ಭಾಗವಾಗಿರುವ ಅಂಕಲಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎರಡು ಬಣಗಳ ನಡುವೆ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ ಒದಗಿಸಲಾಗಿದೆ.ಆಗಿದ್ದೇನು?:
ಅಂಕಲಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಗ್ರಾಮ ಪಂಚಾಯತಿ ಜಾಗದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣದ ಕುರಿತು ನಾಮಫಲಕ ಅಳವಡಿಸಲಾಗಿತ್ತು. ಕರ್ನಾಟಕ ರಾಜ್ಯೋತ್ಸವ ಆಚರಣೆ ಸಮಿತಿ ವತಿಯಿಂದ ರಾಯಣ್ಣ ವೃತ್ತ ನಿರ್ಮಾಣ ಮಾಡಲು ಪರವಾನಗಿ ನೀಡುವಂತೆ ಪುರಸಭೆಗೆ ಮನವಿ ಕೂಡ ಸಲ್ಲಿಸಲಾಗಿತ್ತು. ಆದರೆ, ಈ ಮನವಿಗೆ ಗ್ರಾಮ ಪಂಚಾಯತಿಯಲ್ಲಿ ವಿರೋಧ ವ್ಯಕ್ತವಾಗಿದ್ದು, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.-----------------------
ಬಾಕ್ಸ್...ಆರೋಪಿಗಳ ಬಂಧಿಸದಂತೆ ನಾಡದ್ರೋಹಿಗಳ ಒತ್ತಡ
ಕನ್ನಡ ನೆಲದಲ್ಲಿ ಕನ್ನಡಿಗರ ಮೇಲೆ ಅದು ಕನ್ನಡಧ್ವಜ ಹಾಗೂ ರಾಯಣ್ಣ ವೃತ್ತ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಕನ್ನಡ ಧ್ವಜ ಅಳವಡಿಸಿದ್ದ ಯುವಕರ ಮೇಲೆ ಗೂಂಡಾವರ್ತನೆ ತೋರಿದ್ದು ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ. ಇದರ ನಡುವೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರ ಮೇಲೆ ರಾಜಕೀಯ ಮುಖಂಡರು ಒತ್ತಡ ಹೇರುತ್ತಿರುವ ಆರೋಪ ಕೂಡ ಕೇಳಿ ಬಂದಿದೆ.