ಕಟ್ಟೆಮಾಡು ಅರ್ಚಕರಿಗೆ ಹಲ್ಲೆ: ಕ್ರಮಕ್ಕೆ ಎರಡು ದಿನಗಳ ಗಡುವು

KannadaprabhaNewsNetwork | Published : Jan 29, 2025 1:32 AM

ಸಾರಾಂಶ

ಕಟ್ಟೆಮಾಡು ಗ್ರಾಮದ ಶ್ರೀ ಮೃತ್ಯುಂಜಯ ದೇವಾಲಯದ ಅರ್ಚಕರ ಮೇಲಿನ ಹಲ್ಲೆ ತೀವ್ರವಾಗಿ ಖಂಡಿಸಿರುವ ಕೊಡಗು ಬ್ರಾಹ್ಮಣ ಸಮಾಜ, ಹಲ್ಲೆ ಆರೋಪಿಗಳ ಬಂಧನಕ್ಕೆ ಎರಡು ದಿನಗಳ ಗಡುವು ನೀಡಿದೆ. ತಪ್ಪಿದಲ್ಲಿ 31ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಟ್ಟೆಮಾಡು ಗ್ರಾಮದ ಶ್ರೀ ಮೃತ್ಯುಂಜಯ ದೇವಾಲಯದ ಅರ್ಚಕರ ಮೇಲಿನ ಹಲ್ಲೆ ತೀವ್ರವಾಗಿ ಖಂಡಿಸಿರುವ ಕೊಡಗು ಬ್ರಾಹ್ಮಣ ಸಮಾಜ, ಹಲ್ಲೆ ಆರೋಪಿಗಳ ಬಂಧನಕ್ಕೆ ಎರಡು ದಿನಗಳ ಗಡುವು ನೀಡಿದೆ. ತಪ್ಪಿದಲ್ಲಿ 31ರಂದು ಜಿಲ್ಲೆಯಾದ್ಯಂತ ಇರುವ ದೇವಾಲಯಗಳಲ್ಲಿ ಬೆಳಗ್ಗಿನ ಪೂಜೆ ಪೂರೈಸಿ ಅನಂತರ ಭಕ್ತರಿಗೆ ದೇವಾಲಯ ಬಂದ್ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಮಂಗಳವಾರ ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಬ್ರಾಹ್ಮಣ ಸಮಾಜದ ನೂರಾರು ಮಂದಿ ಸೇರಿ ಕೆಲ ಕಾಲ ಭಜನೆ, ದೇವರ ಕೀರ್ತನೆಗಳನ್ನು ಹೇಳುವ ಮೂಲಕ, ಹಲ್ಲೆ ಖಂಡಿಸಿ ಸಾತ್ವಿಕ ಪ್ರತಿಭಟನೆ ನಡೆಸಿದರು.

ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರನ್ನು ಭೇಟಿಯಾದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು ಅಧ್ಯಕ್ಷ ರಾಮಚಂದ್ರ ಮೂಗೂರು, ಪ್ರಮುಖರಾದ ಶ್ರೀಧರ್ ನೆಲ್ಲಿತ್ತಾಯ, ಜಿ.ಟಿ. ರಾಘವೇಂದ್ರ, ಬಿ.ಜಿ ಅನಂತಶಯನ, ಎಸ್.ಎಸ್. ಸಂಪತ್ ಕುಮಾರ್, ವಕೀಲ ಕೃಷ್ಣಮೂತಿ೯, ಪ್ರಭಾಕರ್ ನೆಲ್ಲಿತ್ತಾಯ, ಡಾ. ರಾಜಾರಾಮ್, ರಾಜಶೇಖರ್, ನಿರ್ದೇಶಕ ಮಂಜುನಾಥ್, ಕೆ.ಕೆ.ವಿಶ್ವನಾಥ್, ಎ.ಗೋಪಾಲಕೃಷ್ಣ , ಅರ್ಚಕರ ಸಂಘದ ಪ್ರಮುಖ ಮಹಾಬಲೇಶ್ವರ ಭಟ್, ರಾಮಕೃಷ್ಣ, ಸುದರ್ಶನ್ , ಪವನ್, ಕೊಡಗು ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ, ನಿವೖತ್ತ ಮೇಜರ್ ವೆಂಕಟಗಿರಿ, ಎಚ್.ಎಸ್. ತಿಮ್ಮಪ್ಪಯ್ಯ, ಹಾ.ತಿ.ಜಯಪ್ರಕಾಶ್, ಡಿ.ಆರ್. ಪ್ರಶಾಂತ್ ಮಹೇಶ್ ಶಗ್ರಿತ್ತಾಯ , ಕೆ.ವಿ. ವೆಂಕಟರಮಣ, ವರುಣ್ ಶರ್ಮ, ವೀಣಾ ಪುರುಷೋತ್ತಮ, ನೀರಜ ರಮೇಶ್ ಸೇರಿದಂತೆ ಹಲವರು ಒತ್ತಾಯ ಪತ್ರ ಸಲ್ಲಿಸಿದರು.

ಕಟ್ಟೆಮಾಡು ದೇವಾಲಯದ ಅರ್ಚಕ ವಿಘ್ನೇಶ್‌ ಭಟ್ ಮೇಲೆ ಹಲ್ಲೆ ಮಾಡಿ, ಸ್ಥಳದಲ್ಲಿದ್ದ ಅವರ ತಾಯಿ ಮೇಲೆ ಕೂಡ ಹಲ್ಲೆ ಮಾಡಿರುವುದು ಖಂಡನೀಯ ಪ್ರಕರಣದ ಪ್ರಮುಖ ಆರೋಪಿ ಮಂಡೇಟಿರ ಅನಿಲ್ ಮತ್ತು ಜತೆಗಿದ್ದವರನ್ನು ಪೊಲೀಸರು ಇನ್ನು 2 ದಿನಗಳೊಳಗೆ ಬಂಧಿಸಬೇಕು ಎಂದು ಒತ್ತಾಯಿಸಲಾಯಿತು.

ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ಅಪನಿಂದನೆ, ಅವಹೇಳನ ಮಾಡುತ್ತಿರುವವರ ವಿರುದ್ದವೂ ಕ್ರಮಕೈಗೊಳ್ಳುವಂತೆಯೂ ಒತ್ತಾಯ ಮಾಡಲಾಯಿತು.

ಹಲ್ಲೆ ಘಟನೆಯ ಹಿಂದೆ ಯಾರೇ ಪ್ರಭಾವಿಗಳು ಇದ್ದರೂ ಅಂಥವರು ಯಾರು ಎಂಬುದನ್ನು ಪೊಲೀಸರು ಬಹಿರಂಗಗೊಳಿಸಬೇಕು.ಯಾರದ್ದೇ ಪ್ರಭಾವಕ್ಕೆ ಮಣಿಯಬಾರದು ಎಂದೂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಲಾಯಿತು.

ಅರ್ಚಕರಿಗೆ ಭದ್ರತೆಗೆ ಆಗ್ರಹ:

ಜಿಲ್ಲೆ/ ದೇವಾಲಯಗಳಲ್ಲಿ ನೂರಾರು ಬ್ರಾಹ್ಮಣರು ಅರ್ಚಕ ವೃತ್ತಿ ನಡೆಸುತ್ತಿದ್ದಾರೆ. ಬಹುತೇಕರು ಗ್ರಾಮದ ಒಂಟಿ ಮನೆಗಳಲ್ಲಿ ವಾಸ ಮಾಡುತ್ತಾ ಪೂಜಾ ಕೈಂಕರ್ಯ ನಡೆಸುತ್ತಿದ್ದಾರೆ. ಕಟ್ಟೆಮಾಡು ದೇವಾಲಯದ ಅರ್ಚಕರ ಮೇಲಿನ ಹಲ್ಲೆಯು ಜಿಲ್ಲೆಯ ಅರ್ಚಕ ಸಮುದಾಯದಲ್ಲಿ ನೋವನ್ನುಂಟು ಮಾಡಿದೆ. ಹೀಗಾಗಿ ಜಿಲ್ಲೆಯಾದ್ಯಂತಲಿನ ದೇವಾಲಯಗಳ ಅರ್ಚಕರಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ಆಯಾ ದೇವಾಲಯಗಳ ವ್ಯಾಪ್ತಿಯ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚನೆ ನೀಡಬೇಕೆಂದೂ ಮನವಿ ಮಾಡಿದರು.

ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಪ್ರತಿಕ್ರಿಯಿಸಿ, ಆರೋಪಿಗಳ ಪತ್ತೆಗೆ ಪೊಲೀಸ್ ತಂಡ ಕಾರ್ಯಪ್ರವೃತ್ತವಾಗಿದೆ. ಈವರೆಗೂ ಯಾವುದೇ ಒತ್ತಡ ಬರಲಿಲ್ಲ. ಯಾವುದೇ ಪ್ರಭಾವಕ್ಕೂ ಮಣಿಯದೆ ಪೊಲೀಸರು ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು. ಎರಡು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯದ ಲಾಭ ಪಡೆದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದರೆ ಅಂಥವರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳುವುದು ಖಂಡಿತಾ ಎಂದೂ ರಾಮರಾಜನ್ ಎಚ್ಚರಿಸಿದರು.

ಒತ್ತಾಯ ಪತ್ರ ಸಲ್ಲಿಕೆಗೂ ಮುನ್ನ ಮಡಿಕೇರಿಯ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸಭೆ ನಡೆಸಿದ ಬ್ರಾಹ್ಣಣ ಸಮಾಜದ ಮುಖಂಡರು ಮುಂದಿನ ಹೋರಾಟದ ಹಾದಿಯ ಬಗ್ಗೆ ಚರ್ಚಿಸಿದರು.

ಜಿಲ್ಲಾಧಿಕಾರಿ ಭೇಟಿ:

ಜಿಲ್ಲಾಧಿಕಾರಿ ವೆಂಕಟರಾಜಾ ಅವರನ್ನೂ ಭೇಟಿಯಾದ ಕೊಡಗು ಬ್ರಾಹ್ಮಣ ವಿಧ್ಯಾಭಿವೖದ್ಧಿ ನಿಧಿ ಪ್ರಮುಖರು, ಅರ್ಚಕರ ಮೇಲೆ ಹಲ್ಲೆ ಮಾಡಿದವರನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿದರು.

ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದು, ಶೀಘ್ರದಲ್ಲಿಯೇ ಆರೋಪಿಗಳ ಬಂಧನದ ಭರವಸೆ ಇದೆ. ಎರಡು ಸಮುದಾಯಗಳ ಜನರು ಶಾಂತಿ ಸುವ್ಯವಸ್ಥೆ ಕಾಪಾಡಲು ಸೌಹಾರ್ದಯುತವಾಗಿ ಮುಂದಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು.

ಗಾಯಾಳುವಿಗೆ ಸಾಂತ್ವನ:

ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಪ್ರಮುಖರು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಚಕ ವಿಘ್ನೇಷ್ ಅವರನ್ನು ಭೇಟಿಯಾಗಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಸಾಂತ್ವನ ಹೇಳಿದರು.

Share this article