ವಕೀಲರ ಮೇಲೆ ಹಲ್ಲೆ, ಕಠಿಣ ಕ್ರಮಕ್ಕೆ ಸಂಡೂರಿನಲ್ಲಿ ಒತ್ತಾಯ

KannadaprabhaNewsNetwork | Published : Apr 22, 2025 1:47 AM

ಸಾರಾಂಶ

ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ವೈ.ಆರ್. ಸದಾಶಿವ ರೆಡ್ಡಿ ಅವರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಸೋಮವಾರ ಸಂಡೂರು ಪಟ್ಟಣದಲ್ಲಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ, ಕೈಗಳಿಗೆ ಕೆಂಪುಪಟ್ಟಿಯನ್ನು ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂಡೂರು: ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷರೂ, ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರೂ ಹಾಗೂ ಹಾಲಿ ಸದಸ್ಯರಾದ ವೈ.ಆರ್. ಸದಾಶಿವ ರೆಡ್ಡಿ ಅವರ ಮೇಲೆ ಬೆಂಗಳೂರಿನಲ್ಲಿಯ ಅವರ ಕಚೇರಿಯಲ್ಲಿ ಏ. ೧೬ರಂದು ಅಪರಿಚಿತ ದುಷ್ಕರ್ಮಿಗಳು ಭೀಕರವಾಗಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಸೋಮವಾರ ಪಟ್ಟಣದಲ್ಲಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ, ಕೈಗಳಿಗೆ ಕೆಂಪುಪಟ್ಟಿಯನ್ನು ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಹಲ್ಲೆಯ ಕುರಿತು ಸೂಕ್ತ ತನಿಖೆ ನಡೆಸಿ, ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಉಪ ತಹಸೀಲ್ದಾರ್ ಸುಧಾ ಅರಮನೆ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ಮಲ್ಲಪ್ಪ ಅರಳಿ ಅವರು ಮನವಿ ಪತ್ರ ಸಲ್ಲಿಸಿ, ವಕೀಲರಾದ ವೈ.ಆರ್. ಸದಾಶಿವ ರೆಡ್ಡಿ ಅವರ ಮೇಲಿನ ಹಲ್ಲೆ ಖಂಡನೀಯ. ಅವರ ಮೇಲೆ ಹಲ್ಲೆ ನಡೆಸಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ವಕೀಲರ ಸುರಕ್ಷತೆಗಾಗಿ ಸರ್ಕಾರ ವಕೀಲರ ರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು, ವಕೀಲರ ಮೇಲೆ ಹಲ್ಲೆ ನಡೆಸುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಹಿರಿಯ ವಕೀಲರಾದ ನಾಗರಾಜ ಗುಡೆಕೋಟೆ ಮಾತನಾಡಿ, ವಕೀಲರು ನ್ಯಾಯ ವಿತರಣಾ ವ್ಯವಸ್ಥೆಗೆ ಅತ್ಯಗತ್ಯ. ವಕೀಲರ ಸುರಕ್ಷತೆ ಅವರ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ವಕೀಲರ ಮೇಲಿನ ದಾಳಿಗಳು ಕಾನೂನು, ಸುವ್ಯವಸ್ಥೆಯನ್ನು ಹಾಳು ಮಾಡುತ್ತವೆ. ಸದಾಶಿವ ರೆಡ್ಡಿ ಅವರ ಮೇಲೆ ಹಲ್ಲೆ ಖಂಡನೀಯ. ಸರ್ಕಾರ ಸೂಕ್ತ ಕ್ರಮಕೈಗೊಂಡು ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಅದು ಇತರ ದುಷ್ಕರ್ಮಿಗಳಿಗೆ ಪಾಠವಾಗಬೇಕು ಎಂದು ಹೇಳಿದರು.

ವಕೀಲರ ಸಂಘದ ಉಪಾಧ್ಯಕ್ಷ ಕೆ.ಆರ್. ದಾದಾಪೀರ್, ಕಾರ್ಯದರ್ಶಿ ಎಚ್. ಕುಮಾರಸ್ವಾಮಿ, ಜಂಟಿ ಕಾರ್ಯದರ್ಶಿ ಪರಶುರಾಮ್ ಪೂಜಾರ್, ಖಜಾಂಚಿ ಎಂ. ಅಂಜಿನಪ್ಪ, ಲೈಬ್ರೇರಿಯನ್ ಡಿ. ನಾಗರಾಜ, ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ವಿ. ನಾಗರಾಜ, ಎಚ್. ನಾಗರಾಜ, ಕೆ. ಹುಚ್ಚಪ್ಪ, ಸಿದ್ಧಿವಿನಾಯಕ ಪಾಟೀಲ್, ಬಿ. ಶ್ರುತಿ, ವಕೀಲರಾದ ವಿಜಯಕುಮಾರ್, ಟಿ.ಎಂ. ಶಿವಕುಮಾರ್, ನಾರಾಯಣಾಚಾರ್, ಬಾಬುಸಾಬ್, ಜಿ.ಕೆ. ರೇಖಾ, ಬಸವರಾಜ, ಮಹಮ್ಮದ್ ಅಯೂಬ್, ಮುನೀರ್ ಉಪಸ್ಥಿತರಿದ್ದರು.

Share this article