ರಟ್ಟೀಹಳ್ಳಿಯಲ್ಲಿ ಕಂದಾಯ ಇಲಾಖೆ ನೌಕರನ ಮೇಲೆ ಹಲ್ಲೆ, ಖಂಡನೆ

KannadaprabhaNewsNetwork |  
Published : Apr 17, 2025, 12:03 AM IST
ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಬುಧವಾರ ತಹಸೀಲ್ದಾರ ಶ್ವೇತಾ ಅಮರಾವತಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಟ್ಟೀಹಳ್ಳಿ ಪಟ್ಟಣದ ತಹಸೀಲ್ದಾರ್‌ ಕಚೇರಿಯ ಕಂದಾಯ ಇಲಾಖೆಯ ನೌಕರ ಲಿಂಗರಾಜ ಲಮಾಣಿ ಅವರ ಮೇಲೆ ನಡೆದ ಹಲ್ಲೆ ಕುರಿತು ರಟ್ಟೀಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು, ಅಪರಾಧಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಟ್ಟೀಹಳ್ಳಿ: ಪಟ್ಟಣದ ತಹಸೀಲ್ದಾರ್‌ ಕಚೇರಿಯ ಕಂದಾಯ ಇಲಾಖೆಯ ನೌಕರ ಲಿಂಗರಾಜ ಲಮಾಣಿ ಅವರ ಮೇಲೆ ನಡೆದ ಹಲ್ಲೆ ಕುರಿತು ರಟ್ಟೀಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರಗೌಡ ಚನ್ನಗೌಡ್ರ, ಪ್ರಕಾಶ ಹರಳಹಳ್ಳಿ, ಬಸವರಾಜ ಗಬ್ಬೂರ ವಿರುದ್ಧ ಜಾತಿ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಹಾಗೂ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಪರಾಧಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಬುಧವಾರ ತಹಸೀಲ್ದಾರ್‌ ಶ್ವೇತಾ ಅಮರಾವತಿ ಅವರಿಗೆ ಮನವಿ ಸಲ್ಲಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ನೀಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಮಾತನಾಡಿ, ರಟ್ಟೀಹಳ್ಳಿ ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಲಿಂಗರಾಜ ಲಮಾಣಿ ಅವರ ಮೇಲೆ ರಟ್ಟೀಹಳ್ಳಿ ನಿವಾಸಿ ಶಂಕರಗೌಡ ಚನ್ನಗೌಡ್ರ, ಕುಂಚೂರು ಗ್ರಾಮದ ಪ್ರಕಾಶ ಹರಳಹಳ್ಳಿ, ಮಾದಾಪುರ ಗ್ರಾಮದ ಬಸವರಾಜ ಗಬ್ಬೂರ ಎಂಬಾತರು ವಂಶವೃಕ್ಷ ವಿಚಾರವಾಗಿ ಏ. 15ರಂದು ಮಧ್ಯಾಹ್ನ 1.50ರ ಸುಮಾರಿಗೆ ಹಲ್ಲೆ ನಡೆಸಿದ್ದಾರೆ. ಅದಕ್ಕೂ ಮುನ್ನ ತಕ್ಷಣ ವಂಶವೃಕ್ಷ ಮಾಡಿ ಕೊಡುವಂತೆ ಸಿಬ್ಬಂದಿ ಮೇಲೆ ಒತ್ತಡ ಹಾಕಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಸಿಬ್ಬಂದಿಯನ್ನು ನಿಂದಿಸಿದ್ದಾರೆ. ಟೇಬಲ್ ಮೇಲಿದ್ದ ಇಂಕ್ ಪ್ಯಾಡ್ ಹಾಗೂ ಕುರ್ಚಿಯಿಂದ ಹಲ್ಲೆ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಮೇಲೆ ಆಗಾಗ ಹಲ್ಲೆ ಪ್ರಕರಣಗಳು ನಡೆಯುತ್ತಿದೆ. ಜಿಲ್ಲಾಡಳಿತ ಕಾನೂನು ಬಾಹಿರವಾಗಿ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕಂದಾಯ ಇಲಾಖೆಯ ನೌಕರ ಲಿಂಗರಾಜ ಲಮಾಣಿ ಮೇಲೆ ಹಲ್ಲೆ ಮಾಡಿದ ಮೂವರ ಮೇಲೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ರಟ್ಟೀಹಳ್ಳಿ ತಹಸೀಲ್ದಾರ್‌ ಸರ್ಕಾರಿ ನೌಕರರ ಪರ ನಿಲ್ಲಬೇಕು ಎಂದರು.

ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮುನೀಶ್ವರ ಚೂರಿ, ಹಾವೇರಿ ಜಿಲ್ಲಾ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಎಸ್‌. ಪಾಟೀಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೀಪಕ್ ಕಾಲ್ಪಾಲ್, ತಾಲೂಕು ಕಾರ್ಯದರ್ಶಿ ನಂಜುಂಡಪ್ಪ ಕೆ.ಸಿ., ಶಿವಕುಮಾರ ಬಂಗೇರ, ಕುಬೇರ ಓಲೇಕಾರ್ ಹಾಗೂ ರಟ್ಟೀಹಳ್ಳಿ ಹಿರೇಕೆರೂರು ನೌಕರರ ಸಂಘದ ಸದಸ್ಯರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ