ಕುಡುಗೋಲಿನಿಂದ ಹಲ್ಲೆ: ಆರೋಪಿ ಪೊಲೀಸ್ ವಶಕ್ಕೆ

KannadaprabhaNewsNetwork |  
Published : Sep 17, 2026, 01:30 AM IST
ಪೋಟೊ: 16ಎಸ್‌ಎಂಜಿಕೆಪಿ05ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.  | Kannada Prabha

ಸಾರಾಂಶ

Attack with sickle: Accused taken into police custody

ಸೊರಬ: ಹಳೆಯ ಹಣಕಾಸಿನ ವ್ಯವಹಾರದ ಹಿನ್ನೆಲೆ ಚಲಿಸುತ್ತಿದ್ದ ಬಸ್ ಅಡ್ಡಗಟ್ಟಿ ಬಸ್‌ ಮ್ಯಾನೇಜರ್ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಸಾಗರ ಟೌನ್‌ನ ನೆಹರೂ ನಗರದ ನಿವಾಸಿ ಹಾಗೂ ಎಮಿರೇಟ್ಸ್ ಬಸ್ ಮ್ಯಾನೇಜರ್ ಮಹಮದ್ ಶಹದ್ ಬಿನ್ ಎಸ್.ಎಚ್. ಅಬ್ಬಾಸ್ (೩೦) ಹಲ್ಲೆಗೊಳಗಾದ ವ್ಯಕ್ತಿ. ಇವರಿಗೂ ಹಾಗೂ ಆರೋಪಿ ಚಿನ್ನಪ್ಪ (ತಂದೆ ಗಣಪತಿ) ಎಂಬಾತನಿಗೂ ಈ ಹಿಂದೆ ಬಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣಕಾಸಿನ ವೈಷಮ್ಯವಿತ್ತು ಎನ್ನಲಾಗಿದೆ.

ಕಳೆದ ಮಂಗಳವಾರ ರಾತ್ರಿ ೮-೧೫ರ ಆನವಟ್ಟಿಯಿಂದ ಸೊರಬ-ಸಾಗರ ಮಾರ್ಗವಾಗಿ ಎಮಿರೇಟ್ಸ್ ಎನ್ನುವ ಖಾಸಗಿ ಬಸ್ ಬೆಂಗಳೂರಿಗೆ ಹೊರಡುವ ವೇಳೆ ಖಾಸಗಿ ಬಸ್ ನಿಲ್ದಾಣದ ಅಂಚೆ ಕಚೇರಿ ಬಳಿ ಆರೋಪಿ ಚಿನ್ನಪ್ಪ ಏಕಾಏಕಿ ಬಸ್‌ನ್ನು ಅಡ್ಡಗಟ್ಟಿ ಮ್ಯಾನೇಜರ್ ಮಹಮದ್ ಶಹದ್ ಅವರನ್ನು ಬಲವಂತವಾಗಿ ಹೊರಗೆಳೆದು, ಬೈಕ್ ಬ್ಯಾಗ್‌ನಲ್ಲಿದ್ದ ಕುಡುಗೋಲನ್ನು ತೆಗೆದು ಶಹದ್ ಅವರ ಮೇಲೆ ಬೀಸಿದ್ದಾನೆ. ರಕ್ಷಿಸಿಕೊಳ್ಳಲು ಹೋದ ಶಹದ್ ಅವರ ಎಡಗೈ ಹಸ್ತಕ್ಕೆ ಬಲವಾದ ಪೆಟ್ಟು ಬಿದ್ದು ತೀವ್ರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಗಲಾಟೆ ತಾರಕಕ್ಕೇರುತ್ತಿದ್ದಂತೆ ಸ್ಥಳದಲ್ಲಿದ್ದವರು ಕೂಡಲೇ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿ ಚಿನ್ನಪ್ಪನನ್ನು ವಶಕ್ಕೆ ಪಡೆದು, ಗಾಯಾಳು ಮಹಮದ್ ಶಹದ್ ಅವರನ್ನು ಆಟೋ ಮೂಲಕ ಸೊರಬದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಗಾಯಾಳು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಆರೋಪಿ ಚಿನ್ನಪ್ಪ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಹಲ್ಲೆ ಆರೋಪದಡಿ ಪ್ರಕರಣ ದಾಖಲಾಗಿದೆ. ಬುಧವಾರ ಸ್ಥಳ ಮಹಜರು ನಡೆಸಿದ ಪಿಎಸ್‌ಐ ಪ್ರವೀಣ್ ಲಂಬಿ ಮತ್ತು ತಂಡ ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಇಒ ಕಚೇರಿ ವಿರುದ್ಧದ ಆರೋಪಗಳ ತನಿಖೆಗೆ ಲೋಕಾಯುಕ್ತಕ್ಕೆ ಲಿಖಿತ ದೂರು
ಆಸ್ಪತ್ರೆ, ಕಾಲೇಜು ಜಾಗದ ಖರಾಬು ಭೂಮಿ ಮಾಯ..!