ಮಂಡ್ಯ ಜಿಲ್ಲಾ ಆಸ್ಪತ್ರೆ ಹಾಗೂ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು (ಕಲ್ಲು ಕಟ್ಟಡ)ಗೆ ಸೇರಿದ ಜಮೀನಿನಲ್ಲಿ ಖರಾಬು ಭೂಮಿಯೇ ಮಾಯವಾಗಿದೆ. ದಾಖಲೆಗಳಲ್ಲಿ ಖರಾಬು ಭೂಮಿಯ ಮಾಹಿತಿಯೇ ಇಲ್ಲದಿರುವುದು ಅಚ್ಚರಿಗೂ ಕಾರಣವಾಗಿದೆ. ಖರಾಬು ಭೂಮಿಯನ್ನು ಹೊರತುಪಡಿಸಿ ಉಳಿಕೆ ಜಾಗವನ್ನಷ್ಟೇ ದಾಖಲೆಗಳಲ್ಲಿ ತೋರಿಸಿರುವುದು ಹಲವು ಅನುಮಾನಗಳು ಮೂಡುವಂತೆ ಮಾಡಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಆಸ್ಪತ್ರೆ ಹಾಗೂ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು (ಕಲ್ಲು ಕಟ್ಟಡ)ಗೆ ಸೇರಿದ ಜಮೀನಿನಲ್ಲಿ ಖರಾಬು ಭೂಮಿಯೇ ಮಾಯವಾಗಿದೆ. ದಾಖಲೆಗಳಲ್ಲಿ ಖರಾಬು ಭೂಮಿಯ ಮಾಹಿತಿಯೇ ಇಲ್ಲದಿರುವುದು ಅಚ್ಚರಿಗೂ ಕಾರಣವಾಗಿದೆ. ಖರಾಬು ಭೂಮಿಯನ್ನು ಹೊರತುಪಡಿಸಿ ಉಳಿಕೆ ಜಾಗವನ್ನಷ್ಟೇ ದಾಖಲೆಗಳಲ್ಲಿ ತೋರಿಸಿರುವುದು ಹಲವು ಅನುಮಾನಗಳು ಮೂಡುವಂತೆ ಮಾಡಿದೆ.ಮೈಸೂರು ಗೆಜೆಟ್ ನೋಟಿಫಿಕೇಷನ್‌ನಂತೆ ೨೨ ಎಕರೆ ೬ ಗುಂಟೆ ಹಾಗೂ ಖರಾಬು ೧೧ಗುಂಟೆ ಸೇರಿ ೩೩ ಎಕರೆ ೨೪ ಗುಂಟೆ, ಮತ್ತೊಂದು ನೋಟಿಫಿಕೇಷನ್‌ನಂತೆ ೧೭ ಎಕರೆ ೬ ಗುಂಟೆ ಹಾಗೂ ಖರಾಬು ೩ ಎಕರೆ ೨೮ ಗುಂಟೆ ಸೇರಿ ೨೦ ಎಕರೆ ೩೪ ಗುಂಟೆ, ಸರ್ಕಾರಿ ಪ್ರೌಢಶಾಲೆಗೆಂದು (ಕಲ್ಲು ಕಟ್ಟಡ) ೨೦ ಎಕರೆ ೩೧ ಗುಂಟೆ ಸೇರಿದಂತೆ ೭೮ ಎಕೆ ೧೫ ಗುಂಟೆ ಸೇರಿ ೨೪ ಎಕರೆ ೧೬ ಗುಂಟೆ ಜಮೀನು ಹೀಗೆ ಒಟ್ಟು ೭೮ ಎಕೆ ೧೫ ಗುಂಟೆ ಭೂ ಸ್ವಾಧೀನವಾಗಿದೆ.
ಮೈಸೂರು ಗೆಜೆಟ್ ನೋಟಿಫಿಕೇಷನ್ ಪ್ರಕಾರವೇ ಜಿಲ್ಲಾ ಆಸ್ಪತ್ರೆ ಹಾಗೂ ಸರ್ಕಾರಿ ಪ್ರೌಢಶಾಲೆಗೆ ಭೂ ಸ್ವಾಧೀನವಾಗಿರುವಂತೆ ಜಮೀನನ್ನು ತೆರವುಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಬಿಗಿಪಟ್ಟು ಹಿಡಿದಿರುವುದು ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಭೂ-ಸ್ವಾಧೀನ ಪ್ರಕ್ರಿಯೆ ಮೂಲಕ ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸಿರುವ ಜಮೀನಿನ ಆರ್‌ಟಿಸಿ ಕಲಂ ೦೯ರಲ್ಲಿ ಮಿಮ್ಸ್ ನಿರ್ದೇಶಕರ ಹೆಸರನ್ನು ದಾಖಲು ಮಾಡಿಕೊಡುವಂತೆ ತಹಸೀಲ್ದಾರ್‌ರವರು ಭೂಸ್ವಾಧೀನವಾಗಿದ್ದ ವಿವಿಧ ಸರ್ವೇ ನಂಬರ್‌ಗಳ ೪೩ ಆರ್‌ಟಿಸಿಯನ್ನು ಮಿಮ್ಸ್ ಹೆಸರಿಗೆ ಒಟ್ಟು ೪೬ ಎಕರೆ ೧೬ ಗುಂಟೆ ಜಮೀನನ್ನು ಇಂಡೀಕರಿಸಲಾಗಿದೆ. ಅಲ್ಲದೇ, ಜಿಲ್ಲಾಸ್ಪತ್ರೆಗೆಂದು ಭೂ ಸ್ವಾಧೀನವಗಿರುವ ಜಮೀನುಗಳಲ್ಲಿ ಮಂಡ್ಯ ಗ್ರಾಮದ ಸರ್ವೇ ನಂ. ೮೫೫/೩ರಲ್ಲಿ ಟೌನ್ ಎಕ್ಸ್‌ಟೆನ್ಷನ್ ೫ ಎಕರೆ ೩೦ ಗುಂಟೆ ಜಮೀನಿದ್ದು ಇದರಲ್ಲಿ ಎರಡು ಎಕರೆ ೩೧ ಗುಂಟೆ ಭೂಸ್ವಾಧೀನವಾಗಿದೆ. ಆದರೆ, ೩ ಎಕರೆ ಖರಾಬು ಜಮೀನಿನ ಬಗ್ಗೆ ಮಾಹಿತಿ ಇರುವುದಿಲ್ಲ.
ಮಂಡ್ಯ ಗ್ರಾಮದ ಸರ್ವೇ ನಂ.೮೬೦ರಲ್ಲಿ ಒಟ್ಟು ೭ ಎಕರೆ ೩೨ ಗುಂಟೆ ಜಮೀನಿದ್ದು ಇದರಲ್ಲಿ ಲಕ್ಷ್ಮಮ್ಮ ಕೋಂ. ಧಪ್ಪೆಧಾರ್ ಸಿದ್ದನಯ್ಕರವರಿಂದ ಎರಡು ಎಕರೆ ೨೩ ಗುಂಟೆ ಜಿಲ್ಲಾಸ್ಪತ್ರೆಗೆಂದು ಭೂಸ್ವಾಧೀನವಾಗಿದೆ. ೫ ಎಕರೆ ೯ ಗುಂಟೆ ಖರಾಬು ಜಮೀನಿನ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ.ಮಂಡ್ಯ ಗ್ರಾಮದ ಸರ್ವೇ ನಂ. ೮೨೪/೩ರಲ್ಲಿ ಒಟ್ಟು ೮ ಎಕರೆ ೧೭ ಗುಂಟೆ ಇದ್ದು, ಇದರಲ್ಲಿ ೩ ಎಕರೆ ೧೩ ಗುಂಟೆ ಜಮೀನು ಮಾತ್ರ ಭೂಸ್ವಾಧೀನವಾಗಿದ್ದು ೭ ಗುಂಟೆ ಖರಾಬು ಸೇರಿ ಆರ್‌ಟಿಸಿಯಲ್ಲಿ ೩೯ ಗುಂಟೆ ಮಾತ್ರ ಇಂಡೀಕರಿಸಲಾಗಿದೆ. ಮತ್ತೊಂದು ಸರ್ವೇ ನಂ. ೮೨೪/೪ಲ್ಲಿ ಒಟ್ಟು ೨ ಎಕರೆ ೩೪ ಗುಂಟೆ ಇದ್ದು ಇದರಲ್ಲಿ ೧ ಎಕರೆ ೨೭ ಗುಂಟೆ ಜಮೀನು ಭೂಸ್ವಾಧೀನವಾಗಿದೆ. ಆರ್‌ಟಿಸಿಯಲ್ಲಿ ೧ ಎಕರೆ ೬ ಗುಂಟೆ ಇಂಡೀಕರಿಸಿ ೨೧ ಗುಂಟೆ ಜಮೀನನ್ನು ಕೈಬಿಟ್ಟಿದ್ದಾರೆ. ಸರ್ವೇ ನಂ.೮೨೭/೧ರಲ್ಲಿ ೩೦ ಗುಂಟೆ ಖರಾಬು ಜಮೀನು ಸೇರಿ ಒಟ್ಟು ವಿಸ್ತೀರ್ಣ ೧ ಎಕರೆ ೧೭ ಗುಂಟೆ ಇದ್ದು, ಇದರಲ್ಲಿ ೧೨ ಗುಂಟೆ ಜಮೀನು ಜಿಲ್ಲಾಸ್ಪತ್ರೆಗೆ ಭೂಸ್ವಾಧೀನವಾಗಿದ್ದರೂ ಇಂಡೀಕರಿಸಿಲ್ಲದಿರುವುದು ಕಂಡುಬಂದಿದೆ.
ಸರ್ವೇ ನಂ.೮೨೮/೫ರಲ್ಲಿ ಖರಾಬು ೧೧ ಗುಂಟೆ ಸೇರಿ ಒಟ್ಟು ವಿಸ್ತೀರ್ಣ ೩೨ ಗುಂಟೆ ಇದೆ. ಇದರಲ್ಲಿ ೧೦ ಗುಂಟೆ ಭೂಸ್ವಾಧೀನವಾಗಿದ್ದು ಆರ್‌ಟಿಸಿಯಲ್ಲಿ ೧೧ ಗುಂಟೆ ಎಂದು ಇಂಡೀಕರಿಸಲಾಗಿದೆ. ಜಿಲ್ಲಾ ಆಸ್ಪತ್ರೆ ಹಾಗೂ ಸರ್ಕಾರಿ ಪ್ರೌಢಶಾಲೆಗೆ (ಕಲ್ಲು ಕಟ್ಟಡ) ಭೂಸ್ವಾಧೀನವಾದಂತೆ ಒತ್ತುವರಿ ಆಗಿರುವ ಜಮೀನುಗಳನ್ನು ತೆರವುಗೊಳಿಸುವಂತೆ ಹಾಗೂ ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳಿಗೆ ಕಾನೂನುಬಾಹೀರವಾಗಿ ಜಮೀನುಗಳನ್ನು ಮಂಜೂರು ಮಾಡಿರುವ ಜಮೀನುಗಳನ್ನು ತೆರವುಗೊಳಿಸುವಂತೆ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಕೆ.ಆರ್.ರವೀಂದ್ರ ಒತ್ತಾಯಿಸಿದ್ದಾರೆ.ಗೆಜೆಟ್ ನೋಟಿಫಿಕೇಷನ್‌ನಲ್ಲಿ ಜಿಲ್ಲಾಸ್ಪತ್ರೆ ಮತ್ತು ಕಲ್ಲುಕಟ್ಟಡ ಕಾಲೇಜಿಗೆ ಭೂಸ್ವಾಧೀನವಾಗಿರುವ ರೀತಿಯಲ್ಲೇ ಜಾಗವನ್ನು ತೆರವುಗೊಳಿಸಬೇಕು. ಖರಾಬು ಜಮೀನನ್ನು ಕೈಬಿಟ್ಟಿರುವ ಹಿನ್ನೆಲೆ ಏನೆಂಬುದು ಅರ್ಥವಾಗುತ್ತಿಲ್ಲ. ಒತ್ತುವರಿ ತೆರವಿನಲ್ಲಿ ಅಧಿಕಾರಿಗಳು ಪ್ರಭಾವಿಗಳನ್ನು ರಕ್ಷಣೆ ಮಾಡುತ್ತಿರುವಂತೆ ಕಂಡುಬರುತ್ತಿದ್ದಾರೆ.- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ