ನನ್ನನ್ನು ಊರಿಗೆ ಓಡಿಸಲು ಯಾವನಿಂದಲೂ ಸಾಧ್ಯವಿಲ್ಲ. ನಾನು ಫಿಟ್ ಇದ್ದು, ಅವಕಾಶ ಬಂದರೆ ವಿಧಾನಸಭೆ ಚುನಾವಣೆಗೆ ಖಂಡಿತಾ ನಿಲ್ಲುತ್ತೇನೆ. ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದಿಂದಾದರೂ ಸರಿ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಡಾ.ಜಿ.ಎಂ.ಸಿದ್ದೇಶ್ವರ ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು..

ಕನ್ನಡಪ್ರಭ ವಾರ್ತೆ ದಾವಣಗೆರೆನನ್ನನ್ನು ಊರಿಗೆ ಓಡಿಸಲು ಯಾವನಿಂದಲೂ ಸಾಧ್ಯವಿಲ್ಲ. ನಾನು ಫಿಟ್ ಇದ್ದು, ಅವಕಾಶ ಬಂದರೆ ವಿಧಾನಸಭೆ ಚುನಾವಣೆಗೆ ಖಂಡಿತಾ ನಿಲ್ಲುತ್ತೇನೆ. ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದಿಂದಾದರೂ ಸರಿ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಡಾ.ಜಿ.ಎಂ.ಸಿದ್ದೇಶ್ವರ ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು..

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸಲ್ಲ. ದಾವಣಗೆರೆ ಜಿಲ್ಲೆಯ ಯಾವುದೇ ಕ್ಷೇತ್ರವಾಗಲೀ ಅಥವಾ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟರೆ ಖಂಡಿತಾ ಸ್ಪರ್ಧಿಸುವೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷವಿದ್ದು, ಅಷ್ಟರಲ್ಲಿ ಮತ್ತೆ ಸನ್ನದ್ಧನಾಗುತ್ತೇನೆ ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನೇ ಸ್ಪರ್ಧಿಸಿದ್ದರೆ ಖಂಡಿತಾ ಗೆಲ್ಲುತ್ತಿದ್ದೆ. ಆಗ ನನ್ನ ಆರೋಗ್ಯ ತೀವ್ರವಾಗಿ ಕೈಕೊಟ್ಟಿದ್ದರಿಂದ ಸ್ಪರ್ಧಿಸಲು ಆಗಲಿಲ್ಲ. ಆಕಸ್ಮಾತ್ ನಾನೇ ಸ್ಪರ್ಧಿಸಿದ್ದರೆ ಇಷ್ಟೆಲ್ಲಾ ಸಮಸ್ಯೆಗಳೇ ಬರುತ್ತಿರಲಿಲ್ಲ. ಖಂಡಿತವಾಗಿಯೂ ನಾನು ಗೆಲ್ಲುತ್ತಿದ್ದೆ. ಈಗ ರಾಜ್ಯ ರಾಜಕಾರಣದಲ್ಲಿ ತೊಡಗುವ ಉದ್ದೇಶವಿದ್ದು, ಪಕ್ಷದ ವರಿಷ್ಟರು ಅವಕಾಶ ಕೊಟ್ಟರೆ ವಿಧಾನಸಭೆಗೆ ಸ್ಪರ್ಧೆ ಮಾಡುತ್ತೇನೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ತಮ್ಮ ಸಹೋದರ ಜಿ.ಎಂ.ಲಿಂಗರಾಜು ಅಥವಾ ತಮ್ಮ ಪುತ್ರ ಜಿ.ಎಸ್.ಅನಿತ್ ಕುಮಾರಗೆ ಪಕ್ಷದ ವರಿಷ್ಠರು ಅವಕಾಶ ಕೊಟ್ಟರೆ ಸ್ಪರ್ಧಿಸಲು ಸಿದ್ಧರಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಯಾರ ಮೇಲಾದರೂ ದೂರು, ತಪ್ಪು ಸಂದೇಶ, ತಿಳಿವಳಿಕೆ ಬಂದರೆ ಇಡಿ ದಾಳಿಯಾಗುತ್ತದೆ. ಇನ್ನೂ ಮೂವರು ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ಇಡಿ ದಾಳಿಯಾಗುತ್ತದೆ ಎಂದ ಸಿಎಂ ಡಿ.ಕೆ.ಶಿವಕುಮಾರಗೆ ಇಡಿ ದಾಳಿ ಬಗ್ಗೆ ಗೊತ್ತಿರಬಹುದು. ಹಿಂದೆ ನಮ್ಮ ಮೇಲೂ ಆಯಿತು. ನಾನು ಕೇಂದ್ರ ಸಚಿವ ಸ್ಥಾನ ತ್ಯಜಿಸಿದ ನಾಲ್ಕು ತಿಂಗಳಿಗೆ ದಾಳಿಯಾಗಿತ್ತು. ಆದಾಯ ತೆರಿಗೆ ಪಾವತಿಸಬೇಕಿತ್ತು. ಅದನ್ನು ಕಟ್ಟಿದೆವು. ಇಡಿ, ಐಟಿ ಇವೆಲ್ಲಾ ಸ್ವತಂತ್ರ, ಸ್ವಾಯತ್ತ ಸಂಸ್ಥೆಗಳು. ದಾಳಿ ಹಿಂದೆ ಸರ್ಕಾರವಿದೆಯೆಂಬುದು ಸರಿಯಲ್ಲ ಎಂದು ಅವರು ತಿಳಿಸಿದರು.

ಭದ್ರಾ ಅಚ್ಚುಕಟ್ಟಿಗೆ ಸರದಿ ನೀರು ಹರಿಸಿ: ಡಾ.ಜಿ.ಎಂ.ಸಿದ್ದೇಶ್ವರಭದ್ರಾ ಡ್ಯಾಂನಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುವ ಸಮಯ ಮುಗಿದಿದ್ದು, ಈಗ ದಿನಗಳಿಗೆ ಸರದಿಯಂತೆ ಕುಡಿಯುವ ನೀರು, ಅಡಕೆ, ತೆಂಗು ಇತರೆ ಬೆಳೆ, ತೋಟದ ಬೆಳಿಗಳಿಗೆ ನೀರು ಬಿಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಭೇಟಿ ನೀಡಿ, ಮನವಿ ಮಾಡುವೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾ ಡ್ಯಾಂನಿಂದ 10 ದಿನಗಳಂತೆ ನೀರು ಬಿಡಲು ಸಿಎಂ ಡಿ.ಕೆ.ಶಿವಕುಮಾರಗೆ ಒತ್ತಾಯ ಮಾಡುತ್ತೇನೆ. ಹಿಂದೆಯೂ ಡಿ.ಕೆ.ಶಿವಕುಮಾರ ನೀರಾವರಿ ಸಚಿವರಿದ್ದ ವೇಳೆ ಒತ್ತಡ ಹೇರಿ, ನೀರು ಬಿಡಿಸಿದ್ದೆವು. ಈಗ ಡ್ಯಾಂನಲ್ಲಿ 179.8 ಅಡಿ ನೀರಿದ್ದು, ಸರ್ಕಾರ ನೀರು ಬಿಡಬಹುದೆಂಬ ನಿರೀಕ್ಷೆ ಇದೆ ಎಂದರು.

ತಕ್ಷಣದಿಂದಲೇ ಭದ್ರಾ ಡ್ಯಾಂನಿಂದ ಭದ್ರಾ ನಾಲೆಗಳಿಗೆ ಸರದಿ ಆದಾರದಲ್ಲಿ ನೀರು ಬಿಡಬೇಕು. ಬೇಸಿಗೆ ಬೆಳೆಗೆಂದು ಜನವರಿಯಿಂದ ಸತತ 120-130 ದಿನಗಳ ಕಾಲ ನೀರು ಹರಿಸಬೇಕು. ಎಲೆನೋ ಕಾರಣಕ್ಕೆ ಮಳೆ ಕೊರತೆಯಾಗುವ ಅಪಾಯವೆಂದು ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೇ, ದಿನದಿನಕ್ಕೂ ಬಿಸಿಲ ಝಳ ಹೆಚ್ಚುತ್ತಲೇ ಇದೆ. ಭದ್ರಾ ಡ್ಯಾಂನಲ್ಲಿ ಸಂಗ್ರಹ ಆಗಿರುವ ನೀರು ಸಹ ಬಿಸಿಲಿಗೆ ಹೆಚ್ಚಿನದಾಗಿ ಆವಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಅವರು ವಿವರಿಸಿದರು.

ಜಲ ಸಂಪನ್ಮೂಲ ಸಚಿವರು, ಇಲಾಖೆ ಕಾರ್ಯದರ್ಶಿಗಳು, ನೀರಾವರಿ ತಜ್ಞರು, ಮುಖ್ಯ ಅಭಿಯಂತರರು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಭದ್ರಾ ಡ್ಯಾಂನಿಂದ ನೀರು ಬಿಡುವಂತೆ ಭಾರತೀಯ ರೈತ ಒಕ್ಕೂಟದ ಪ್ರೊ.ಸಿ.ನರಸಿಂಹಪ್ಪ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಶಾಬನೂರು ಎಚ್.ಆರ್.ಲಿಂಗರಾಜ ಸೇರಿದಂತೆ ಹಲವಾರು ರೈತ ಮುಖಂಡರ ನೇತೃತ್ವದಲ್ಲಿ ಹೋರಾಟ ನಡೆಸಿ, ಜಿಲ್ಲಾ ಮಂತ್ರಿಗೂ ಮನವಿ ಮಾಡಿದ್ದರು. ಜಿಲ್ಲಾ ಮಂತ್ರಿ ನೀರು ಬಿಡಿಸುತ್ತಾರೆಂದು ಅಂದುಕೊಂಡಿದ್ದೆವು. ಈಗ ಭಾರತೀಯ ರೈತ ಒಕ್ಕೂಟವೇ ಸದ್ಯ ನೀರು ಬಿಡದಂತೆ ಧ್ವನಿ ಎತ್ತುತ್ತಿದೆ ಎಂದು ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ನಮ್ಮ ಸರ್ಕಾರವಿದ್ದಾಗ ಹಿಂದೆ ಭದ್ರಾ ನಾಲೆ ಆಧುನೀಕರಣಕ್ಕೆ 926 ಕೋಟಿ ರು. ನೀಡಲಾಗಿತ್ತು. ಆ ನಂತರ ಭದ್ರಾ ಮೇಲ್ದಂಡೆಗೆ 17.41 ಟಿಎಂಸಿ ನೀರನ್ನು ತುಂಗಾ ನದಿಯಿಂದ ಲಿಫ್ಟ್ ಮಾಡಿದ ನಂತರವೇ ಹರಿಸಬೇಕೆಂಬ ನಿರ್ಣಯವಾಗಿತ್ತು. ತುಂಗಾದಿಂದ ನೀರನ್ನು ಭದ್ರಾ ಡ್ಯಾಂಗೆ ಲಿಫ್ಟ್ ಮಾಡಿ, ಮೇಲ್ದಂಡೆಗೆ ಕೊಡಬೇಕು. 15-30 ಕಿಮೀ ವ್ಯಾಪ್ತಿಯಲ್ಲಿ ಕಾಮಗಾರಿ ಬಾಕಿ ಇದ್ದು, ಅರಣ್ಯ ಇಲಾಖೆಯಿಂದಲೂ ಕ್ಲಿಯರೆನ್ಸ್ ಸಿಕ್ಕಿದೆ. ರಾಜ್ಯ ಸರ್ಕಾರ 30 ಕೋಟಿ ಅನುದಾನ ಕೊಟ್ಟು, ಬಾಕಿ ಕಾಮಗಾರಿ ಪೂರ್ಣಗೊಳಿಸಲಿ. ತುಂಗಾದಿಂದ ಭದ್ರಾ ಡ್ಯಾಂಗೆ ನೀರು ತುಂಬಿದ ನಂತರವೇ ಭದ್ರಾ ಮೇಲ್ದಂಡೆಗೆ ಹರಿಸಲಿ ಎಂದು ಡಾ.ಜಿ.ಎಂ.ಸಿದ್ದೇಶ್ವರ ಒತ್ತಾಯಿಸಿದರು.