ಬಂಕಾಪುರ: ಬಂಕಾಪುರ ಪಟ್ಟಣವು ಇತಿಹಾಸ ಪ್ರಸಿದ್ಧ ನಾಡು ಆಗಿದ್ದು ಇದರ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಪಟ್ಟಣವನ್ನು ಕನಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸುವುದು ಸೂಕ್ತವಾಗಿದೆ. ಅದಕ್ಕೆ ನಾನು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ ಎಂದು ಶಾಸಕ ಯಾಸೀರಅಹ್ಮದ ಖಾನ್ ಪಠಾಣ ಹೇಳಿದರು.
ಪಕ್ಕದ ಗುಡ್ಡದಚನ್ನಾಪುರ ಗ್ರಾಮವು ಈಗಾಗಲೇ ಕನಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆಯಾಗಿದ್ದು ಈಗಾಗಲೇ 14 ಕೋಟಿ ಹಣ ಬಿಡುಗಡೆಯಾಗಿದೆ. ಬಂಕಾಪುರ ಪಟ್ಟಣವು ಕನಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದರೆ ಬಾಡ, ಗುಡ್ಡದಚನ್ನಾಪುರ ಹಾಗೂ ಬಂಕಾಪುರ ಅಭಿವೃದ್ಧಿ ಪಥದಲ್ಲಿ ಸಾಗುತ್ತವೆ ಎಂದರು. ನಾಲ್ಕು ಸಾವಿರ ಮತಗಳ ಮುನ್ನಡೆಯಿಂದ ನನ್ನನ್ನು ಚುನಾವಣೆಯಲ್ಲಿ ವಿಜಯಶಾಲಿಯಾಗಿಸಲು ಕಾರಣವಾದ ಬಂಕಾಪುರ ಪಟ್ಟಣವನ್ನು ನಾನು ಅಭಿವೃದ್ಧಿಪಡಿಸುವಲ್ಲಿ ಕೈ ಜೋಡಿಸುತ್ತೇನೆ ಎಂದರು.
ಶಿಗ್ಗಾಂವ, ಸವಣೂರ, ಬಂಕಾಪುರ ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರಿನ ಅಭಿವೃದ್ಧಿಗೆ 350 ಕೋಟಿ ಅನುದಾನದಡಿಯಲ್ಲಿ ಕಾಮಗಾರಿ ಕಾರ್ಯ ಪ್ರಾರಂಭ ಮಾಡಲಾಗುತ್ತಿದ್ದು, ಇನ್ನು ಮುಂದೆ ಮೂರು ಪಟ್ಟಣಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ 24 ಗಂಟೆ ಕಾಲ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದರು.ನಾನು ಸಾಮಾನ್ಯ ಶಾಸಕನಾಗಿದ್ದು 20 ತಿಂಗಳ ಅಧಿಕಾರದ ಅವಧಿಯಲ್ಲಿ ನಾನು 450 ದೇವಸ್ಥಾನಗಳ ಅಭಿವೃದ್ಧಿ ಮಾಡಿದ್ದೇನೆ ಹಾಗೂ 8000 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದೇನೆ ಎಂದರು. ಪಟ್ಟಣದ ಒಡ್ಡರ ಓಣಿಯ ಬಿಲಾಲ್ ಆಂಜನೇಯ ದೇವಸ್ಥಾನಕ್ಕೆ ₹ 50 ಲಕ್ಷ, ಮೌಲಾನಾ ಆಜಾದ ಶಾಲೆಯ ಜಿ+2 ಮಹಡಿಗಳಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ₹ 6 ಕೋಟಿ 50 ಲಕ್ಷ , ಉಡಚಮ್ಮದೇವಿ ಸಮುದಾಯ ಭವನಕ್ಕೆ ₹ 50 ಲಕ್ಷ , ಅರಳೆಲೆ ಮಠದ ಸಮುದಾಯ ಭವನಕ್ಕೆ ₹ 50 ಲಕ್ಷ , ಮಾಗಿಕೆರೆ ಬೀರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ₹ 50 ಲಕ್ಷ , ಚಾಮುಂಡೇಶ್ವರಿ ದೇವಸ್ಥಾನದ ಕಾಮಗಾರಿಗೆ ₹ 25 ಲಕ್ಷ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದೇನೆ ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಮಮತಾ ಮಾಗಿ, ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷರಾದ ಗುಡ್ಡಪ್ಪ ಜಲದಿ, ಆಯುಬಖಾನ ಪಠಾಣ, ಕುರುಬರ ಸಮಾಜದ ಜಿಲ್ಲಾ ಅಧ್ಯಕ್ಷರಾದ ಚಂದ್ರು ಮಾಯಣ್ಣವರ , ಸತೀಶ ಆಲದಕಟ್ಟಿ, ಸೋಮಣ್ಣ ಕುರಿ, ತಹಮಿದ್ ಖಾಜಿ, ಶರಣು ಹರವಿ, ಕೃಷ್ಣ ಆಲದಕಟ್ಟಿ, ನೀಲಪ್ಪ ಕುರಿ, ಗಿರೀಶ ನಾಗರಹಳ್ಳಿ ಮುಂತಾದವರು ಭಾಗವಹಿಸಿದ್ದರು. ಬೀರಪ್ಪ ಗಿಡ್ಡಣ್ಣವರ ನಿರೂಪಣೆ ಮಾಡಿದರು.