ಕನ್ನಡಪ್ರಭ ವಾರ್ತೆ ಧಾರವಾಡ
ಆರೇಳು ಜನರ ಅಪರಿಚಿತರ ಗುಂಪೊಂದು ನಗರದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ತಮಟಗಾರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯೋಜನೆ ರೂಪಿಸಿದ್ದು, ಅವರು ಸ್ಥಳದಲ್ಲಿ ಇರದ ಕಾರಣ ಸಮೀಪದ ರಸೂಲಪುರ ಪ್ರದೇಶದಲ್ಲಿರುವ ಮನೆಗೆ ನುಗ್ಗಿ ಹಲ್ಲೆಗೆ ಯತ್ನ ಮಾಡಿದೆ. ತಮಟಗಾರ ಶನಿವಾರ ಬೆಂಗಳೂರಿನಲ್ಲಿದ್ದ ಕಾರಣ ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆದು ತಮಟಗಾರ ಸಹೋದರ ಜಮಾಲ್ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆಗೂ ಮುಂದಾಗಿದ್ದಾರೆ ಎಂದು ಗೊತ್ತಾಗಿದೆ. ಇದರಿಂದ ಆತಂಕಗೊಂಡ ಕುಟುಂಬದ ಸದಸ್ಯರು ತಡರಾತ್ರಿಯೇ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೊಲೆ ಸಂಚಿದುಘಟನೆಯ ಬೆನ್ನಲ್ಲಿಯೇ ಭಾನುವಾರ ಧಾರವಾಡಕ್ಕೆ ಆಗಮಿಸಿದ ಇಸ್ಮಾಯಿಲ್ ತಮಾಟಗಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಮ್ಮ ಸಮಾಜದ ಹುಡುಗರಿಂದಲೇ ನನ್ನ ಹೊಡೆಯಲು ವಿರೋಧಿಗಳು ಯೋಜನೆ ರೂಪಿಸಿದ್ದಾರೆ. ಹತ್ತಕ್ಕೂ ಹೆಚ್ಚು ಹುಡುಗರು ಗಾಂಜಾ ಸೇವನೆ ಮಾಡಿ ಬಂದಿದ್ದರು ಎಂಬ ಮಾಹಿತಿ ಇದೆ. ಮಣಕಿಲ್ಲಾ ಪ್ರದೇಶದಲ್ಲಿ ನನ್ನ ಹೊಡೆಯುವುದಾಗಿ ಹೇಳಿದ್ದಾರಂತೆ. ಒಂದು ವರ್ಷದಿಂದ ಮುಸ್ಲಿಂ ಯುವಕರ ಗುಂಪೊಂದು ಕೊಲೆ ಸಂಚು ರೂಪಿಸಿದೆ. ಪೋಲಿಸ್ ಇಲಾಖೆ ಮೇಲೆ ತಮಗೆ ನಂಬಿಕೆ ಇದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆ ಹುಡುಗರಿಗೆ ಪ್ರಚೋದನೆ ನೀಡಿದ್ದು ಯಾರು? ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ನನ್ನನ್ನು ಕೊಲೆ ಮಾಡುವ ಕುರಿತು ಯೋಜನೆ ರೂಪಿಸಿದ್ದು, ಈ ಕುರಿತು ಸ್ವತಃ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ. ರಾಜಕೀಯ ದ್ವೇಷದಿಂದ ಕೊಲೆ ಮಾಡಲು ಯೋಜನೆ ರೂಪಿಸಿದ್ದಾರೆ. ಇಸ್ಮಾಯಿಲ್ ತಮಾಟಗಾರ ಅವರನ್ನು ಕೊಲೆ ಮಾಡಿದರೆ 25 ವರ್ಷ ಅರಾಮಾಗಿ ರಾಜಕೀಯ ಮಾಡಬಹುದು ಎಂದುಕೊಂಡಿದ್ದಾರೆ. ತನಿಖೆ ಮಾಡಿ ಪೊಲೀಸರು ಅವರು ಯಾರೆಂದು ಕಂಡು ಹಿಡಿಯಲಿ ಎಂದು ತಮಟಗಾರ ಆಗ್ರಹಿಸಿದರು.