ಕೃಷ್ಣ ಎನ್. ಲಮಾಣಿ
ಜಲಾಶಯದ ಗೇಟ್ ನಂ. 19 ಈಗ ಕಳಚಿ ಬಿದ್ದಿರುವ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಜಲಾಶಯದಿಂದ 52 ಟಿಎಂಸಿ ನೀರು ನದಿಗೆ ಹರಿಬಿಡುವ ಅನಿವಾರ್ಯ ಎದುರಾಗಿದೆ. ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ನೆಚ್ಚಿರುವ ರೈತರಲ್ಲಿ ಆತಂಕ ಮನೆ ಮಾಡಿದೆ. ತುಂಗಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡು ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ 10 ಲಕ್ಷ ಎಕರೆ ಪ್ರದೇಶಕ್ಕೆ ನೀರು ಉಣಿಸುತ್ತದೆ. ಇನ್ನು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಈ ಜಲಾಶಯ ನೀರು ಒದಗಿಸುತ್ತದೆ.
ತಗ್ಗಿದ ಒಳಹರಿವು:ತುಂಗಭದ್ರಾ ಜಲಾಶಯದ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆ ಇದ್ದುದರಿಂದ ಈ ಬಾರಿ ಜಲಾಶಯದಿಂದ ಜು. 22ರಿಂದಲೇ ನದಿಗೆ ನೀರು ಹರಿಸಲಾಗಿತ್ತು. ಹಾಗಾಗಿ ಜಲಾಶಯದಿಂದ ಈಗಾಗಲೇ 100 ಟಿಎಂಸಿ ನೀರು ನದಿ ಪಾಲಾಗಿದೆ. ಈಗ ಜಲಾಶಯ ಭರ್ತಿಯಾಗಿ ಕಾಲುವೆಗಳ ಮೂಲಕ ನೀರು ಬಿಡುತ್ತಿರುವುದರಿಂದ ರೈತರು, ಬತ್ತ, ಬಾಳೆ, ಕಬ್ಬು, ಮೆಣಸಿನಕಾಯಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಜಲಾಶಯದ ಒಳಹರಿವು 28 ಸಾವಿರ ಕ್ಯುಸೆಕ್‌ಗೆ ತಗ್ಗಿರುವುದರಿಂದ ಈಗ ಅಕ್ಟೋಬರ್ ತಿಂಗಳ ವರೆಗೆ ಮಲೆನಾಡಿನ ಮಳೆ ನೆಚ್ಚಿಕೊಳ್ಳುವ ಸ್ಥಿತಿ ಬಂದೊದಗಿದೆ.
ತುಂಗಭದ್ರಾ ಜಲಾಶಯ ನೆಚ್ಚಿರುವ ರೈತರು ಈಗಾಗಲೇ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಆತಂಕಗೊಂಡಿದ್ದು, ಈ ಬಗ್ಗೆ ಜಲ ಸಂಪನ್ಮೂಲ ಸಚಿವರ ಬಳಿಯೂ ಅಳಲು ತೋಡಿಕೊಂಡಿದ್ದಾರೆ. ಇನ್ನು ತುಂಗಭದ್ರಾ ಮಂಡಳಿ ನಿರ್ಲಕ್ಷ್ಯದಿಂದಲೇ ಇಂತಹದೊಂದು ಪ್ರಮಾದ ಸೃಷ್ಟಿಯಾಗಿದೆ ಎಂದು ರೈತರು ದೂರಿದ್ದಾರೆ.
ಜಲಾಶಯದ ಗೇಟ್ ನಂಬರ್ 19 ಕಳಚಿ ಬೀಳಲು ತುಂಗಭದ್ರಾ ಮಂಡಳಿ ಅಧಿಕಾರಿಗಳೇ ಕಾರಣರಾಗಿದ್ದಾರೆ. ಹಾಗಾಗಿ ಜಲಾಶಯದಿಂದ ಅರ್ಧ ಡ್ಯಾಂ ನೀರು ಖಾಲಿ ಮಾಡಲಾಗುತ್ತಿದೆ. ಇದಕ್ಕೆ ಕಾರಣಕರ್ತರಾಗಿರುವ ತುಂಗಭದ್ರಾ ಮಂಡಳಿ ಕಾರ್ಯದರ್ಶಿಯನ್ನು ಅಮಾನತು ಮಾಡಬೇಕು ಎನ್ನುತ್ತಾರೆ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ.