ಕನ್ನಡಪ್ರಭ ವಾರ್ತೆ ಮೈಸೂರು
ಕೆರೆ ಕಟ್ಟೆಗಳನ್ನು ತುಂಬಿಸುವಂತೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ ರೈತರು, ನಂತರ ಕಾಡಾ ಕಚೇರಿ ಮುತ್ತಿಗೆಗೆ ಹಾಕಲು ಯತ್ನಿಸಿದರು. ಈ ವೇಳೆ ಪ್ರತಿಭಟನಾನಿರತ ರೈತರನ್ನು ಪೋಲಿಸರು ಪ್ರವೇಶ ದ್ವಾರದ ಬಳಿಯೇ ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಡಾ ಕಚೇರಿ ಒಳಗೆ ಪ್ರವೇಶಿಸಲು ಅವಕಾಶ ಕೊಡದೇ ತಡೆಯೊಡ್ಡಿದ್ದರಿಂದ ಕಾಡಾ ಕಚೇರಿಯ ಹೊರ ಭಾಗದಲ್ಲೇ ಪ್ರತಿಭಟಿಸಿದ ರೈತರು, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ, ಕಬಿನಿ ಅಚ್ಚುಕಟ್ಟು ಭಾಗದಲ್ಲಿ ಬೆಳೆದು ನಿಂತಿರುವ ಕಬ್ಬು, ಅಡಿಕೆ, ತೆಂಗು, ಬಾಳೆ ಇನ್ನಿತರೆ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹಾಳಾಗುತ್ತಿವೆ. ಕಾವೇರಿ- ಕಬಿನಿ ಅಚ್ಚುಕಟ್ಟು ಪ್ರದೇಶದ ಕೆರೆ ಕಟ್ಟೆಗಳು ಬರಿದಾಗುತ್ತಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಕೃಷಿ ಪಂಪ್ ಸೆಟ್ ಗಳಿಗೆ ಅಂತರ್ಜಲ ಕುಸಿದಿದ್ದು ನೀರಿಲ್ಲದೆ ತೋಟದ ಬೆಳೆಗಳಾದ ಹಣ್ಣು ತರಕಾರಿ ಇನ್ನಿತರೆ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಜನ, ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದ್ದು, ಸಮಸ್ಯೆ ಅರಿತು ತುರ್ತಾಗಿ ನಾಲೆಗಳ ಮೂಲಕ ಕಾವೇರಿ ಅಚ್ಚುಕಟ್ಟು ಭಾಗದ ವಿಸಿ ನಾಲೆ, ವರುಣ ನಾಲೆಯ ಶಾಖಾ ನಾಲೆ, ಉಪ ಶಾಖಾ ನಾಲೆಗಳು ಮತ್ತು ಚಿಕ್ಕದೇವರಾಯ ನಾಲೆಗಳಿಗೆ ಹಾಗೂ ಕಬಿನಿ ಜಲಾಶಯದ ಬಲದಂಡೆ ನಾಲೆಗಳಿಗೆ ನೀರು ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ನಂತರ ಕಾಡಾ ಕಚೇರಿಯ ಉಪ ಎಂಜಿನಿಯರ್ ಗೌತಮ್ ಅವರಿಗೆ ರೈತರು ಮನವಿ ಪತ್ರ ಸಲ್ಲಿಸಿದರು.