ಕನ್ನಡಪ್ರಭ ವಾರ್ತೆ ಮೈಸೂರು
ಎಂಡಿಎನಲ್ಲಿ ನಡೆದಿರುವ 50:50 ನಿವೇಶನ ಹಂಚಿಕೆ ಹಗರಣದಲ್ಲಿ ಶಾಮೀಲಾದ ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಯುವ ಮೋರ್ಚಾ ಕಾರ್ಯಕರ್ತರು ನಡೆಸಿದ ಹೋರಾಟ ತೀವ್ರವಾಗಿತ್ತು.
ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ರಾಮಸ್ವಾಮಿ ವೃತ್ತದಲ್ಲಿ ಕೆಲಕಾಲ ಪ್ರತಿಭಟಿಸಿದರು. ನಂತರ ಎಂಡಿಎ ಕಚೇರಿ ಕಡೆಗೆ ಮೆರವಣಿಗೆ ಮುಖಮಾಡಿತು. ಈ ವೇಳೆ ಮಹಾರಾಜ ಕಾಲೇಜಿನ ಗೇಟ್ ಬಳಿಯೇ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಭಟನಾ ಮೆರವಣಿಗೆ ತಡೆದರು.ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಪೊಲೀಸರೊಡನೆ ವಾಗ್ವಾದಕ್ಕಿಳಿದರು. ಅಲ್ಲದೆ ರಸ್ತೆಯಲ್ಲಿಯೇ ಕುಳಿತು ಕೆಲಕಾಲ ಪ್ರತಿಭಟಿಸಿದರು. ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಡದಿದ್ದಾಗ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದರು.
ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವುದು ಸರಿಯಲ್ಲ. ನಿಯಮಗಳನ್ನು ಗಾಳಿಗೆ ತೂರಿ ಕೋಟ್ಯಂತರ ರೂ. ಅವ್ಯವಹಾರ ನಡೆಸಲಾಗಿದೆ. ಆದರೂ ಯಾರೊಬ್ಬರ ಮೇಲೂ ಇದುವರೆಗೂ ಕ್ರಮ ಜರುಗಿಸಿಲ್ಲ. ಇದರ ಹಿಂದೆ ಯಾರೆಲ್ಲರ ಷಡ್ಯಂತ್ರ ಇರುವುದೋ ಅವರೆಲ್ಲರನ್ನೂ ತನಿಖೆಗೆ ಒಳಪಡಿಸಬೇಕು ಮತ್ತು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ನಾಯಕರು ಗೈರು:
ಇಂದಿನ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕರು ಪಾಲ್ಗೊಳ್ಳುವ ನಿರೀಕ್ಷೆ ಇತ್ತು.
ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ, ಎಂಡಿಎ ಕಚೇರಿಗೆ ಮುತ್ತಿಗೆ ಹಾಕುವ ವಿಷಯ ತಿಳಿದು ನಗರದ ಜೆ.ಎಲ್.ಬಿ ರಸ್ತೆಯಲ್ಲಿನ ಎಂಡಿಎ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.