ಕನ್ನಡಪ್ರಭ ವಾರ್ತೆ ಮುಧೋಳ

ವಿದ್ಯುತ್ ವಲಯದ ಖಾಸಗೀಕರಣದ ನಿರ್ಧಾರ ಮತ್ತು ದಶಕಗಳ ಬೇಡಿಕೆಯಾಗಿರುವ ಸಸಾಲಟ್ಟಿ ಏತನೀರಾವರಿ ಯೋಜನೆ ವಿಳಂಬವನ್ನು ಖಂಡಿಸಿ ರೈತ ಸಂಘಟನೆಗಳ ಮುಖಂಡರು ಕಾನಿಪ ಸಂಘದ ಭವನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಮೂರು ದಿನದೊಳಗಾಗಿ ಜಿಲ್ಲಾಧಿಕಾರಿಗಳು ಮುಧೋಳಕ್ಕೆ ಆಗಮಿಸಿ ರೈತರ ವಿಶೇಷ ಸಭೆಯೊಂದನ್ನು ಕರೆದು ರೈತರ ಸಮಸ್ಯೆಯನ್ನು ಬಗೆಹರಿಸದಿದ್ದರೆ ತಾವು ಬೀದಿಗಿಳಿದು ಹೋರಾಟ ನಡೆಸುವುದಾಗಿ ರೈತ ಮುಖಂಡರು ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಗಡುವು ನೀಡಿದರು.

ಸಸಾಲಟ್ಟಿ ಏತನೀರಾವರಿ ಯೋಜನೆಗೆ ಹಿನ್ನಡೆ, ರೈತರ ಬದುಕು ದುಸ್ತರ:

ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರ ಸಸಾಲಟ್ಟಿ ಏತನೀರಾವರಿ ಯೋಜನೆ ಜಾರಿಗೆ ಭರವಸೆ ನೀಡಿತ್ತು. ಆದರೆ, ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಉದಾಸೀನತೆಯಿಂದ ಯೋಜನೆಗೆ ತೀವ್ರ ಹಿನ್ನಡೆಯಾಯಿತು.

ಆರ್.ಬಿ.ತಿಮ್ಮಾಪುರ ಅವರು, ಜಿಲ್ಲಾ ಉಸ್ತುವಾರಿ ಸಚಿವರಿದ್ದ ಅವಧಿಯಲ್ಲಿ ನೂರಾರು ಕೋಟಿ ಹಣ ಖರ್ಚಾಗಿದೆ. ಆದರೂ ಈ ಯೋಜನೆ ಪೂರ್ಣಗೊಳ್ಳದ ಕಾರಣ ಇಂದಿಗೂ ರೈತರ ಬದುಕು ದುಸ್ತರವಾಗಿದೆ. ವಿದ್ಯುತ್ ಸಂಪರ್ಕ ಕೊರತೆ ನೆಪವೊಡ್ಡಿ ಪ್ರಸ್ತುತ ಸರ್ಕಾರವೂ ಪ್ರಗತಿ ಸಾಧಿಸುತ್ತಿಲ್ಲ ಎಂದು ಆರೋಪಿಸಿದರು.


ವಿದ್ಯುತ್ ಖಾಸಗೀಕರಣ ವಿರುದ್ಧ ತೀವ್ರ ಆಕ್ರೋಶ ಉಚಿತ ಬೇಡ, ವೈಜ್ಞಾನಿಕ ಬಿಲ್ ನೀಡಿ:

ಕೇಂದ್ರ ಸರ್ಕಾರ ವಿದ್ಯುತ್ ವಲಯವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗಿರುವುದನ್ನು ಖಂಡಿಸಿದ ಬಸವಂತಪ್ಪ ಕಾಂಬಳೆ ಅವರು ಎಸ್.ಎಂ.ಕೃಷ್ಣ ಸರ್ಕಾರ ಖಾಸಗೀಕರಣಕ್ಕೆ ಕೈಹಾಕಿದಾಗ ರೈತರು ಬೀದಿಗಿಳಿದು ಹೋರಾಡಿದ್ದನ್ನು ನೆನಪಿಸಿದರು. ಮುಂಬರುವ ಚುನಾವಣೆಯಲ್ಲಿ ಗ್ರಾಮಗಳಿಗೆ ಬರುವ ಜನಪ್ರತಿನಿಧಿಗಳು ರೈತರ ಪ್ರಶ್ನೆ ಎದುರಿಸುವುದು ಕಷ್ಟವಾಗಲಿದೆ ಎಂದು ಎಚ್ಚರಿಸಿದರು.

ನಮಗೆ ಉಚಿತ ವಿದ್ಯುತ್ ಬೇಡ. ವೈಜ್ಞಾನಿಕವಾಗಿ ಬಿಲ್ ನಿಗದಿಪಡಿಸಿದರೆ ರೈತರು ಪ್ರಾಮಾಣಿಕವಾಗಿ ಬಿಲ್ಲ ಪಾವತಿಸುತ್ತಾರೆ. ನಿರಂತರ ವಿದ್ಯುತ್ ಇಲ್ಲದೆ ಕೃಷಿಗೆ ಅನ್ಯಾಯ ಆಗುತ್ತಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಸರ್ಕಾರವೇ ವಿದ್ಯುತ್ ನಿಗಮವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ತೀವ್ರ:

ರಸಗೊಬ್ಬರ ಕೊರತೆ ಮತ್ತು ಬೆಲೆ ಏರಿಕೆಗೆ ಕೃತಕ ಅಭಾವ ಸೃಷ್ಟಿಸಿ ದಂಧೆ ನಡೆಸುತ್ತಿರುವವರ ಹಿಂದೆ ಕೃಷಿ ಸಚಿವರು ಮತ್ತು ಅಧಿಕಾರಿಗಳ ಕೈವಾಡವಿದೆ ಎಂದು ಮುಖಂಡರು ಶಂಕಿಸಿದರು.

ಡಿಎಪಿ ಮತ್ತು ಯೂರಿಯಾ ಗೊಬ್ಬರ ಸಕಾಲಕ್ಕೆ ಸಿಗದೆ ದರ ಏರಿಕೆಯಾಗಿದೆ. ಕೃಷಿ ಸಚಿವರು ರೈತರ ಸಭೆ ಕರೆದು ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರೈತ ಮುಖಂಡ ಸುರೇಶ್ ಚಿಂಚಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಎಣ್ಣೆ ಬಳಸುವಂತೆ ಕರೆ ನೀಡುತ್ತಾರೆ. ಆದರೆ, ನಾಲ್ಕು ವರ್ಷಗಳಿಂದ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಮತ್ತು ಶೇಂಗಾ ಬಿತ್ತನೆ ಬೀಜವೇ ಸಿಗುತ್ತಿಲ್ಲ. ಬೀಜವಿಲ್ಲದಿದ್ದರೆ ಬಿತ್ತನೆ ಹೇಗೆ, ಒಳ್ಳೆಯ ಎಣ್ಣೆ ತಿನ್ನುವುದು ಹೇಗೆ ಎಂದು ಪ್ರಶ್ನಿಸಿದರು.

ವಿದ್ಯುತ್, ನೀರಾವರಿ, ಬಿತ್ತನೆ ಬೀಜ ಮತ್ತು ಗೊಬ್ಬರ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ದುಂಡಪ್ಪ ಯರಗಟ್ಟಿ, ರೈತಪರ ಹೋರಾಟಗಾರ ಸುಭಾಸ್ ಶಿರಬೂರ, ಅಶೋಕ ಪಡಸಲಗಿ, ಸುರೇಶ್ ಚಿಂಚಲಿ ಸೇರಿದಂತೆ ಹಲವು ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.